‘ಬಘೀರ’ ಚಿತ್ರದ ಸಾಂಗ್ ಬಿಡುಗಡೆಗೆ ಕ್ಷಣಗಣನೆ: ದೀಪಾವಳಿಗೆ ತೆರೆಗೆ ಬರಲಿದೆಯೇ ಸಿನಿಮಾ..?!

ಬೆಂಗಳೂರು: ಸ್ಯಾಂಡಲ್‌ವುಡ್ ದಿಗ್ಗಜ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌ನಿಂದ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ‘ಬಘೀರ’ ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ. ಅಬ್ಬರದ ಟೀಸರ್ ಮೂಲಕ ಸ್ಯಾಂಡಲ್‌ವುಡ್ ಅಭಿಮಾನಿಗಳ ಹೃದಯ ಗೆದ್ದಿರುವ ರೋರಿಂಗ್ ಸ್ಟಾರ್ ಶ್ರೀಮುರಳಿಯ ‘ಬಘೀರ’ ಚಿತ್ರದ ಮೊದಲ ಹಾಡು ‘ರುಧೀರ ಧಾರಾ’ ಅಕ್ಟೋಬರ್ 17ರಂದು ಬೆಳಿಗ್ಗೆ 10:35ಕ್ಕೆ ಬಿಡುಗಡೆಯಾಗಲಿದೆ.
ಪ್ರಶಾಂತ್ ನೀಲ್ ಕಥೆ ಬರೆದಿರುವ ಈ ಚಿತ್ರದಲ್ಲಿ ಶ್ರೀಮುರಳಿ, ಪೊಲೀಸ್ ಅವತಾರದಲ್ಲಿ ಆಕ್ಷನ್ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ರುಕ್ಮಿಣಿ ವಸಂತ್ ಅವರು ಜೋಡಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಸೇರಿದಂತೆ ಹಲವು ನಟರ ಪ್ರತಿಭೆ ಕಾಣಿಸಲಿದೆ.
ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ನಿರ್ಮಾಣದ ಬಘೀರ ದೀಪಾವಳಿಗೆ ಅಕ್ಟೋಬರ್ 31ಕ್ಕೆ ಬಿಡುಗಡೆಯಾಗಲಿದೆ. ಹಿಟ್ ಹಾಡು, ಸಾಹಸ ಮತ್ತು ಶ್ರೀಮುರಳಿಯ ಆಕ್ಷನ್ ಅವತಾರವು ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಡಾಕ್ಟರ್ ಸೂರಿ ನಿರ್ದೇಶನದ ಈ ಚಿತ್ರ, ಹೈ-ವೊಲ್ಟೇಜ್ ಆಕ್ಷನ್ ದೃಶ್ಯಗಳನ್ನು ಹೊಂದಿದ್ದು, ಚೇತನ್ ಡಿಸೋಜ್ ಸಾಹಸ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸೌಂಡ್ ಟ್ರ್ಯಾಕ್ ಕೂಡ ಹೆಚ್ಚಿನ ಕುತೂಹಲ ಮೂಡಿಸಿದೆ.
ಬಘೀರ ಚಿತ್ರದ ಪ್ರಚಾರವು ರುಧೀರ ಧಾರಾ ಸಾಂಗ್‌ನಿಂದ ಆರಂಭವಾಗಿ, ಮುಂದಿನ ದಿನಗಳಲ್ಲಿ ಸಾಲು ಸಾಲು ಆಕರ್ಷಕ ಪ್ರಚಾರದ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳನ್ನು ಸೆಳೆಯಲಿದೆ.