ಕ್ರೈಂ ವರದಿಗಾರ ಗಣೇಶ್ ಇನ್ನಿಲ್ಲ: ಪತ್ರಿಕೋದ್ಯಮ ಲೋಕದಲ್ಲಿ ಶೋಕದ ಛಾಯೆ
ಬೆಂಗಳೂರು: ಕನ್ನಡ ಪತ್ರಿಕೋದ್ಯಮ ಲೋಕದಲ್ಲಿ ಕ್ರೈಂ ಗಣೇಶ್ ಎಂದೇ ಹೆಸರಾಗಿದ್ದ ಜನಪ್ರಿಯ ಪತ್ರಕರ್ತ ಗಣೇಶ್ ಇಹಲೋಕ ತ್ಯಜಿಸಿದ್ದಾರೆ. 20 ವರ್ಷಗಳಿಗಿಂತ ಹೆಚ್ಚು ಕಾಲ ಪತ್ರಿಕೋದ್ಯಮ ಸೇವೆ ಸಲ್ಲಿಸಿದ ಅವರು, ಆರೋಗ್ಯ ಸಮಸ್ಯೆಗಳಿಂದಾಗಿ ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು.
ತಾಳೆಕೆರೆಯಲ್ಲಿ ಅಂತಿಮ ವಿಧಿವಿಧಾನ:
ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿಯ ಪುತ್ರರಾಗಿದ್ದ ಗಣೇಶ್ ತಮ್ಮ ಪತ್ನಿ ಪಾರ್ವತಮ್ಮ ಮತ್ತು ಪುತ್ರನನ್ನು ಅಗಲಿದ್ದಾರೆ. ಅವರ ಮೃತದೇಹವನ್ನು ಇಂದು ತಾಳೆಕೆರೆಗೆ ಕೊಂಡೊಯ್ಯಲಿದ್ದು, ಗುಡ್ಡೆ ರಂಗನಾಥಸ್ವಾಮಿ ಗುಡಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು.
ಪತ್ರಿಕೋದ್ಯಮದಲ್ಲಿ ವಿಶಿಷ್ಟ ಹಾದಿ:
ಕಸ್ತೂರಿ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಜನಪ್ರಿಯವಾದ ಗಣೇಶ್, ಕ್ರೈಂ ವರದಿಗಾರಿಕೆಯಲ್ಲಿ ನಿಪುಣತೆ ತೋರಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವರು ಕೈ ಹಿಡಿದ ಕೆಲವರು ಇಂದು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನ ಪ್ರೇರಣೆ ದಾಯಕ ಕೆಲಸಗಳ ಮೂಲಕ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾದ ಗಣೇಶ್, ಟಿವಿ 5 ನ ಇನ್‌ಪುಟ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಸಾರ್ವಜನಿಕರ ಸಂತಾಪ:
ಗಣೇಶ್ ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಅನೇಕ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗಣ್ಯರು ಕೂಡ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.