ಬೆಂಗಳೂರಿನಲ್ಲಿ ಸೈಬರ್ ವಂಚನೆ: ಮೋಸ ಹೋದ ಮಹಿಳೆ ಕಳೆದುಕೊಂಡದ್ದು ಬರೋಬ್ಬರಿ ₹51.29 ಲಕ್ಷ ರೂಪಾಯಿ!
ಬೆಂಗಳೂರು: 31 ವರ್ಷದ ಬಹುರಾಷ್ಟ್ರೀಯ ಕಂಪನಿಯ ಉತ್ಪನ್ನ ಮಾರ್ಕೆಟಿಂಗ್ ಮುಖ್ಯಸ್ಥೆ, ಸೈಬರ್ ಅಪರಾಧಿಗಳಿಂದ 51.29 ಲಕ್ಷ ರೂ. ವಂಚನೆಗೆ ಒಳಗಾದ ಘಟನೆ ಬೆಂಗಳೂರಿನಲ್ಲಿ ಭಾರಿ ಸಂಚಲನ ಉಂಟುಮಾಡಿದೆ. ವಂಚಕರು ಫೆಡೆಕ್ಸ್ ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳ ವೇಷ ಧರಿಸಿ, ಮಹಿಳೆಯನ್ನು 10 ಗಂಟೆಗಳ ಕಾಲ ಸ್ಕೈಪ್ ಕಾಲ್‌ನಲ್ಲಿ ಒತ್ತಡಕ್ಕೊಳಪಡಿಸಿದರು.
ಆಧಾರ್ ಬಳಸಿಕೊಂಡು ಡ್ರಗ್ ಸಾಗಣೆ?:
ಸೆಪ್ಟೆಂಬರ್ ತಿಂಗಳ 17 ರಂದು, ಮಹಿಳೆಗೆ ಕರೆ ಬಂದಿದ್ದು, ಕರೆ ಮಾಡಿದವರು ಮಹಿಳೆಯ ಆಧಾರ್ ವಿವರಗಳನ್ನು ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ. ನಂತರ, ಅವರು ಮಹಿಳೆಯ ಹೆಸರಿನಲ್ಲಿ ಮುಂಬೈ ಸೈಬರ್ ಕ್ರೈಮ್ ಅಧಿಕಾರಿ ಎಂದು ಫೇಕ್ ಅಧಿಕಾರಿಗೆ ಕರೆ ಕಳುಹಿಸಿದರು, ಅವರು ಮಹಿಳೆಯ ಆಧಾರ್ ನಂಬರನ್ನು ಅಪರಾಧಗಳಲ್ಲಿ ಬಳಸಲಾಗುತ್ತಿದೆ ಎಂದು ಬೆದರಿಸಿದರು.
ಬ್ಯಾಂಕ್ ಖಾತೆ ಖಾಲಿ:
10 ಗಂಟೆಗಳ ಕಾಲ ನಡೆದ ಸ್ಕೈಪ್ ಮಾತುಕತೆ ವೇಳೆ, ವಂಚಕರು ಆಂತಕ ಉಂಟುಮಾಡಿ ಮಹಿಳೆಯನ್ನು ಕುಟುಂಬದಿಂದ ದೂರವಿಡಲು ಪ್ರಯತ್ನಿಸಿದರು. ಈ ಸಮಯದಲ್ಲಿ, ಅವರ ಐಸಿಐಸಿಐ ಬ್ಯಾಂಕ್ ಖಾತೆಯಿಂದ ₹50 ಲಕ್ಷ ಸಾಲ ಪಡೆದು, ₹1.99 ಲಕ್ಷ ಹಣವನ್ನು ತದನಂತರ ಬೇರೆ ಖಾತೆಗಳಿಗೆ ವರ್ಗಾಯಿಸಿದರು. ವಂಚಕರೊಬ್ಬರು ಹಿರಿಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡು, ಆಧಾರ್ ಅನ್ನು ಗಂಭೀರ ಅಪರಾಧಗಳಲ್ಲಿ ಬಳಸಲಾಗಿದೆ ಎಂಬ ಸುಳ್ಳನ್ನು ನಂಬಿಸಿದರು.
ಪ್ರಕರಣ ದಾಖಲು:
ಮಹಿಳೆ ಸೆಪ್ಟೆಂಬರ್ 21 ರಂದು ದೂರು ದಾಖಲಿಸಿದ ಬಳಿಕ, ಪೋಲಿಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (c) ಮತ್ತು 66 (d), ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318 (4) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಫೆಡೆಕ್ಸ್ ಸ್ಪಷ್ಟನೆ:
ಈ ಮೊದಲು, ಫೆಡೆಕ್ಸ್ ಏಜೆನ್ಸಿ ಯಾವುದೇ ರೀತಿಯ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ರೀತಿಯ ವಂಚನೆಗಳನ್ನು ತಕ್ಷಣ ಪ್ರಾಧಿಕಾರಗಳಿಗೆ ವರದಿ ಮಾಡುವಂತೆ ಮನವಿ ಮಾಡಿದೆ. ಬೆಂಗಳೂರಿನಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಜಾಗೃತಿ ವಹಿಸುವುದು ಅತ್ಯಗತ್ಯವಾಗಿದೆ.