ಡಿ. ದೇವರಾಜ ಅರಸು ಅವರಿಗೆ “ಮರಣೋತ್ತರ ಭಾರತ ರತ್ನ” ನೀಡಲು ಶಿಫಾರಸ್ಸು ಮಾಡಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿ. ದೇವರಾಜ ಅರಸು ಅವರ ಸ್ಮರಣಾರ್ಥ ಮಹತ್ವದ ಘೋಷಣೆ ಮಾಡಿದ್ದಾರೆ. ಸಮಾಜದ ಶೋಷಿತ, ಬಡ, ಮತ್ತು ಅವಕಾಶವಂಚಿತ ಜನಾಂಗಗಳಿಗೆ ಬೆಳಕು ಹರಿಸಿದ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಅವರಿಗೆ “ಮರಣೋತ್ತರ ಭಾರತ ರತ್ನ” ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಅವರು ಘೋಷಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ ಅವರು ಈ ವಿಷಯವನ್ನು ಹೊರಡಿಸಿದ್ದು, “ನಾನು ಸೇರಿದಂತೆ ಈ ನಾಡಿನ ಕೋಟ್ಯಂತರ ಜನರು ದೇವರಾಜ ಅರಸು ಅವರ ಋಣದಲ್ಲಿ ಇದ್ದೇವೆ. ಅವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಮೀಸಲಾತಿ, ಭೂಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತಪದ್ಧತಿ ನಿರ್ಮೂಲನೆ ಮುಂತಾದ ಕಾನೂನುಗಳು ಸಮಾಜದ ಹಿತಾಸಕ್ತಿಯನ್ನು ಸಾಧಿಸಿವೆ,” ಎಂದು ಸ್ಮರಿಸಿದ್ದಾರೆ.
ಅದರ ಜೊತೆಗೆ, ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ “ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ” ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. “ಇದು ದೇವರಾಜ ಅರಸು ಅವರ ಋಣ ತೀರಿಸುವ ಸಣ್ಣ ಪ್ರಯತ್ನ” ಎಂದು ಅವರು ಹೇಳಿದ್ದಾರೆ.