“ದಾಸವರೇಣ್ಯ ಶ್ರೀ ವಿಜಯದಾಸರು” ಭಾಗ 2 ಚಿತ್ರಕ್ಕೆ ಭವ್ಯ ಮುಹೂರ್ತ: ಕನ್ನಡದಲ್ಲೊಂದು ಅಪರೂಪದ ಆಧ್ಯಾತ್ಮಿಕ ಚಿತ್ರ..!

ಬೆಂಗಳೂರು: ವಿಜಯದಾಸರ ಆರಾಧನಾ ಪರ್ವಕಾಲದಲ್ಲೇ “ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರದ ಎರಡನೇ ಭಾಗಕ್ಕೆ ಬೆಂಗಳೂರಿನ ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿ ಮುಹೂರ್ತ ನೆರವೇರಿತು. ಮಹಾನ್ ಹರಿದಾಸರ ನೆನಪುಗಳನ್ನು ಮೆಲುಕು ಹಾಕುವ ಚಿತ್ರಕ್ಕೆ ಗಣ್ಯರು ಶುಭಾಶಯಗಳನ್ನು ನೀಡಿದರು.
ಸಿನಿಮಾದ ಮೊದಲ ಸನ್ನಿವೇಶಕ್ಕೆ ವಿದ್ವಾನ್ ಶ್ರೀಸತ್ಯಧ್ಯಾನಾಚಾರ್ಯ ಕಟ್ಟಿ ಫಲಕ ತೋರಿಸಿದರು. ಶ್ರದ್ಧೆ ತುಂಬಿದ ಆವರಣದಲ್ಲಿ, ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭಾರಂಭ ಮಾಡಿದರು. ವಿಶೇಷ ಅತಿಥಿಗಳಾಗಿ ನೂತನ ಟಿಟಿಡಿ ಸದಸ್ಯರಾದ ಎಸ್. ನರೇಶ್ ಕುಮಾರ್ ಹಾಗೂ ಗಮಕ ಕಲಾವಿದ ಪ್ರಸನ್ನ ಹಾಜರಿದ್ದರು.
ಚಿತ್ರ ನಿರ್ಮಾಪಕ ತ್ರಿವಿಕ್ರಮ ಜೋಶಿ, ತಮ್ಮ ತಂದೆ ತಾಯಿಯ ಆಶೀರ್ವಾದದೊಂದಿಗೆ “ದಾಸವರೇಣ್ಯ ಶ್ರೀ ವಿಜಯದಾಸರು” ಚಿತ್ರದ ಎರಡನೇ ಭಾಗಕ್ಕೆ ಚಾಲನೆ ನೀಡಿದ್ದು, ತಮ್ಮ ಪಾತ್ರಕ್ಕೆ ಬದ್ಧರಾಗಿದ್ದಾರೆ. ಈ ಭಾಗದಲ್ಲಿಯೂ ಅವರು ವಿಜಯದಾಸರ ಪಾತ್ರ ನಿರ್ವಹಿಸುತ್ತಿದ್ದಾರೆ. ನವೆಂಬರ್ 12ರಂದು ದಿ. ಅನಂತಕುಮಾರ್ ಅವರ ಸ್ಮರಣೆಯ ಸಂದರ್ಭದಲ್ಲಿ, ಅವರ ಕುರಿತಾದ ಚಿತ್ರ ನಿರ್ಮಾಣದ ಅಭಿಪ್ರಾಯವನ್ನೂ ತ್ರಿವಿಕ್ರಮ ಅವರು ಹಂಚಿಕೊಂಡಿದ್ದು, ಅನಂತಕುಮಾರ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.
ಈ ಚಿತ್ರಕ್ಕೆ ಮಧುಸೂದನ್ ಹವಾಲ್ದಾರ್ ನಿರ್ದೇಶನ ಮಾಡಿದ್ದು, ಜೆ.ಎಂ.ಪ್ರಹ್ಲಾದ್ ಬರೆದಿರುವ ಸಂಭಾಷಣೆಯೊಂದಿಗೆ 9 ಹಾಡುಗಳನ್ನು ಹೊಂದಿದೆ. ಪ್ರಸಿದ್ಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ನಟಿ ಶ್ರೀಲತ ಬಾಗೇವಾಡಿ ಹರಳಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.