ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ರಾಯರೆಡ್ಡಿ ಸ್ಪೋಟಕ ಹೇಳಿಕೆ.

ಬೆಂಗಳೂರು: ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ತೀವ್ರ ಚರ್ಚೆ ನಡೆಯುತ್ತಿದೆ. ಜಾತಿಗೆ ಒಂದು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಬೇಕು ಎಂಬ ಕೂಗು ಸಹ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಅನೇಕ ನಾಯಕರು ಈಗಾಗಲೇ ತಾವೂ ಸಹ ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಆದರೆ ಇಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.
“ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಮಾನ್ಯತೆ ಇಲ್ಲ.” ಎಂದು ರಾಯರೆಡ್ಡಿ ಹೇಳಿದರು. ಸಂವಿಧಾನದಲ್ಲಿ ಯಾವುದೇ ವಿಧಿಯಲ್ಲಿ ಕೂಡ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಉಲ್ಲೇಖವಿಲ್ಲ. “ಡಿಸಿಎಂ ಕೇವಲ ಗೌರವದ ಹುದ್ದೆ ಹೊರತು ಸಂವಿಧಾನದ ಹುದ್ದೆಯಲ್ಲ. ಜಾತಿಗೆ ಒಬ್ಬರು ಡಿಸಿಎಂ ಮಾಡಬೇಕು ಎಂಬ ಚರ್ಚೆ ಅವಶ್ಯವಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು.” ಎಂದರು.
“ಸಿಎಂ ಬದಲಾವಣೆ ಬಗ್ಗೆ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ನೀಡಿದ್ದು ಸರಿಯಲ್ಲ. ಸಿಎಂ ಸ್ಥಾನ ಬಿಟ್ಟುಕೊಡಿ ಎನ್ನಲು ಅವರೇನು ಶಾಸಕಾಂಗ ಪಕ್ಷದ ಸದಸ್ಯರಾ? ಪಕ್ಷದ ವರಿಷ್ಠರಾ? ಧಾರ್ಮಿಕ ಮುಖಂಡರಾದವರು ಜನರಿಗೆ ಧರ್ಮದ ಬಗ್ಗೆ ಬೋಧನೆ ಮಾಡಬೇಕು. ಇಲ್ಲದಿದ್ದರೆ ಜನರಲ್ಲಿ ಅವರ ಬಗ್ಗೆ ಅಗೌರವ ಭಾವನೆ ಮೂಡುತ್ತದೆ. ಇದು ಧಾರ್ಮಿಕ ಅಶಿಸ್ತು ತೋರಿಸುತ್ತದೆ.” ಎಂದು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಹೇಳಿಕೆ ನೀಡಿದರು.