ರಾಜ್ಯದಲ್ಲಿ ಹೆಚ್ಚಾಯ್ತು ಡೆಂಗ್ಯೂ ಪ್ರಕರಣ; ಒಂದೇ ದಿನ ಮೂರು ಸಾವು.
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಪ್ರತಿದಿನವೂ ಡೆಂಗ್ಯೂ ಕೇಸ್ ಗಳ ಸಂಖ್ಯೆ ಹೆಚ್ಚುತ್ತಾ ಇದೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಈ ರೋಗದ ವಿರುದ್ಧ ಇನ್ನೂ ಪರಿಣಾಮಕಾರಿಯಾದಂತಹ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಈಗಾಗಲೇ ಆಶಾ ಕಾರ್ಯಕರ್ತೆಯರು ಗ್ರಾಮದ ಪ್ರತಿ ಮನೆಗಳಿಗೆ ತೆರಳಿ, ಡೆಂಗ್ಯೂ ಕುರಿತಾದ ಜಾಗೃತಿಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ. ಆದರೂ ಸಹ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ.
ನಿನ್ನೆ ಭಾನುವಾರ ದಿನಾಂಕ: 07-07-2024 ರಂದು, ಕೇವಲ ಒಂದು ದಿನಕ್ಕೆ 159 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಡೆಂಗ್ಯೂಯಿಂದ ಮರಣಗೊಂಡವರ ಸಂಖ್ಯೆ ರಾಜ್ಯದಲ್ಲಿ 6ಕ್ಕೆ ಏರಿಕೆಯಾಗಿದೆ. ಈ ಅಂಕಿಅಂಶಗಳನ್ನು ಖುದ್ದು ಆರೋಗ್ಯ ಇಲಾಖೆಯು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಈಗಾಗಲೇ ರಾಜ್ಯ ಸರ್ಕಾರ ಕೂಡ ಡೆಂಗ್ಯೂ ರೋಗ ಪತ್ತೆ ಮಾಡುವ ಪರೀಕ್ಷೆಗಳಿಗೆ ದರವನ್ನು ನಿಗದಿ ಮಾಡಿದೆ. ಎಲಿಸಾ ಪರೀಕ್ಷೆಗೆ ₹300, ಹಾಗೂ ರಾಪಿಡ್ ಪರೀಕ್ಷೆಗೆ ₹250 ಎಂದು ತಿಳಿಸಿದೆ.