ಪಕ್ಷದ ವಿರೋಧಿ ಬಣಕ್ಕೆ ಖಡಕ್ ವಾರ್ನಿಂಗ್ ಕೊಟ್ಟ ಡಿಕೆಶಿ..!

ದೆಹಲಿಯಿಂದ ವಾಪಸ್ ಆದ ಬಳಿಕ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ “ನನ್ನನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಮನೇಲಿ ಕೂರುವುದಕ್ಕೆ ಅಲ್ಲ. ನನ್ನ ಶಕ್ತಿ ಏನು ಅನ್ನುವುದು ಎಲ್ಲರಿಗೂ ಗೊತ್ತು ಅದಕ್ಕೆ ನನ್ನನ್ನು ದೆಹಲಿ, ಆಂಧ್ರ, ತೆಲಂಗಾಣ, ಹಿಮಾಚಲ ಪ್ರದೇಶಗಳಿಗೆ ಚುನಾವಣಾ ಪ್ರಚಾರಕ್ಕೆ ಕರೆಯುತ್ತಾರೆ. ನನ್ನ ಕರೆದ ಹಾಗೆ ಬೇರೆಯವರನ್ನು ಕರೆಯುತ್ತಾರಾ? ಎಂದು ಕಾಂಗ್ರೆಸ್ ಬಣದ ನಾಯಕರನ್ನು ಪ್ರಶ್ನಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಸಿ ವೇಣುಗೋಪಾಲ್ ಭೇಟಿಯ ಬಳಿಕ ಈ ಸಂದೇಶ ರವಾನಿಸಿರುವುದು ಕಾಂಗ್ರೆಸ್ ಬಣದಲ್ಲಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಪಕ್ಷ ನನಗೆ ಅನೇಕ ಜವಾಬ್ದಾರಿಯನ್ನು ಕೊಟ್ಟಿದೆ. 1990 ರಿಂದ ಪಕ್ಷವು ಸಚಿವರನ್ನಾಗಿ ಮಾಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ನಾನು ಚುನಾವಣಾ ಪ್ರಚಾರದ ಸಮಿತಿಯ ಅಧ್ಯಕ್ಷನಾಗಿದ್ದೆ ಮುಂದೆ ನಾನು ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇನೆ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭೇಟಿಯಾಗಿರುವ ಡಿಕೆ ಶಿವಕುಮಾರ್ ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಮೊದಲನೆಯದು ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲ ಶುರುವಾಗುವುದಕ್ಕೆ ದಲಿತ ಸಚಿವರ ಸಭೆಯೇ ಮೂಲ ಕಾರಣ ಆದ್ದರಿಂದ ಸಭೆ ನಡೆಸುತ್ತಿರುವ ನಾಯಕರಿಗೆ ಯಾವುದೇ ಕಾರಣಕ್ಕೂ ಈ ರೀತಿಯ ಸಭೆ ನಡೆಸದಂತೆ ಎಚ್ಚರಿಕೆಯನ್ನು ನೀಡಬೇಕು. ಎರಡನೇಯದಾಗಿ ಮುಂದಿನ ಕೆಲವೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗುತ್ತಿರುವುದರಿಂದ ಈ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿದರೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಆದ್ದರಿಂದ ಯಾವುದೇ ನಾಯಕರ ಒತ್ತಾಯಕ್ಕೆ ಮಣಿಯದೆ ಅಧ್ಯಕ್ಷ ಸ್ಥಾನವನ್ನ ಬದಲಾಯಿಸಬಾರದು ಎಂದು ಚರ್ಚಿಸಲಾಗಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ “ನಾನು ಕಾಂಗ್ರೆಸ್, ಎಂದಿಗೂ ಬಿಜೆಪಿಗೆ ಹತ್ತಿರವಾಗುವುದಿಲ್ಲ ನಾನು ಕಾಂಗ್ರೆಸಿಗನಾಗಿಯೇ ಇರುತ್ತೇನೆ. ಜೈನ ಮಂದಿರ, ದರ್ಗಾ, ಚರ್ಚ್ ಎಲ್ಲದಕ್ಕೂ ಭೇಟಿ ನೀಡುತ್ತೇನೆ ಎಲ್ಲ ಧರ್ಮವನ್ನು ನಾನು ಗೌರವಿಸುತ್ತೇನೆ ಆದರೆ ನಾನು ಹಿಂದುವಾಗಿಯೇ ಹುಟ್ಟಿದ್ದೇನೆ ಹಿಂದುವಾಗಿಯೇ ಸಾಯುತ್ತೇನೆ” ಎಂದು ಡಿಕೆಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ