ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಸ್ಪೋಟ.
ಪಾಕಿಸ್ತಾನ: ಫೆಬ್ರವರಿ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದರೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪಾಕಿಸ್ತಾನದ ಹಲವು ಕಡೆ ಬಾಂಬ್ ದಾಳಿ ಹಾಗೂ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ.
ಇಂದು ಫೆಬ್ರವರಿ 5ರ ಬೆಳಿಗ್ಗೆ ಸುಮಾರು 3 ಗಂಟೆಗೆ, ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ದಾಬ್ರಾನ್ ಪ್ರದೇಶದ ಪೋಲಿಸ್ ಠಾಣೆಯೊಂದರ ಮೇಲೆ ಸ್ನೈಪರ್ ದಾಳಿ ಹಾಗೂ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಿ, ಕನಿಷ್ಠ 10 ಜನ ಪೋಲಿಸ್ ಸಿಬ್ಬಂದಿಗಳನ್ನು ಸಾಯಿಸಿದ್ದಾರೆ ಎಂದು ಅಲ್ಲಿನ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಸಂಘಟನೆಗಳು ಹೊತ್ತಿಲ್ಲ. ಈ ದಾಳಿ ಚುನಾವಣಾ ಉದ್ದೇಶದಿಂದ ನಡೆದಿದೆಯೇ ಎಂದು ಕೂಡ ಸ್ಪಷ್ಟವಾಗಿಲ್ಲ. ಇದೇ ಫೆಬ್ರವರಿ 2ರಂದು ಪಾಕಿಸ್ತಾನದ ಚುನಾವಣಾ ಆಯೋಗದ ಕಛೇರಿಯ ಪಾರ್ಕಿಂಗ್ ಸ್ಥಳದಲ್ಲಿ ಬಾಂಬ್ ಸ್ಫೋಟವಾಗಿತ್ತು. ಕೆಲವು ದಿನಗಳ ಹಿಂದೆ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ಸಂಭವಿಸಿದ್ದವು. ಈ ಎಲ್ಲಾ ಘಟನೆಗಳು ಪಾಕಿಸ್ತಾನದ ಚುನಾವಣೆಯ ಮೇಲೆ ಪ್ರಭಾವ ಬೀರುತ್ತವೆ. ಏನೇ ಆದರೂ ಇವುಗಳಿಗೆ ಬೆಲೆ ತೆತ್ತವರು ಮಾತ್ರ ಪಾಕಿಸ್ತಾನದ ಸಾಮಾನ್ಯ ಜನರು ಬಿಟ್ಟರೆ ಬೇರೆ ಯಾರೂ ಅಲ್ಲ.