ಚುನಾವಣಾ ಬಾಂಡ್ ಪೆಡಂಭೂತದ ಮೇಲೆ ಸುಪ್ರೀಂ ಪ್ರಹಾರ
ಆದರ್ಶ ಪಾಟೀಲ್
ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ಹರಿದು ಬಂದಿದೆ. ಬಿಜೆಪಿ 6500 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಪಡೆದಿದೆ. 2022-23ರಲ್ಲಿ ಕಾರ್ಪೊರೇಟ್ಗಳು 850 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಅದರಲ್ಲಿ 719 ಕೋಟಿ ಬಿಜೆಪಿಗೆ ಬಂದಿದ್ದು ಕಾಂಗ್ರೆಸ್ ಕೇವಲ 79 ಕೋಟಿ ಮಾತ್ರ. ಈ ರೀತಿಯಾಗಿ ಹಲವಾರು 1000 ಕೋಟಿ ರೂಪಾಯಿಗಳ ದೇಣಿಗೆಗಳಿಂದ, ಬಿಜೆಪಿ ಹಣದ ವಿಷಯದಲ್ಲಿ ಅತ್ಯಂತ ಶಕ್ತಿಶಾಲಿ ಪಕ್ಷವಾಯಿತು, ಹಾಗೂ ಹಣಕಾಸಿನ ಬಲದ ವಿಷಯದಲ್ಲಿ ಭಾರತದ ರಾಜಕೀಯ ಪಕ್ಷಗಳು ದೊಡ್ಡ ಅಸಮತೋಲನವನ್ನು ಎದುರಿಸುತ್ತಿವೆ.
“ಎಲ್ಲೆಡೆ ಅಂಧಕಾರ ಕವಿದಾಗ, ಭರವಸೆಯ ಒಂದು ಕಿರಣ ಇಡೀ ಅಂಗಳವನ್ನೇ ಬೆಳಗುತ್ತದೆ,” ಎನ್ನುವಂತೆ ದೇಶದ ಸರ್ವೋಚ್ಛ ನ್ಯಾಯಾಲಯದ ಇಂದಿನ ಐತಿಹಾಸಿಕ ತೀರ್ಪು, ನ್ಯಾಯಂಗದ ಮೇಲಿನ ಭರವಸೆಯನ್ನು ಇನ್ನಷ್ಟು ಪ್ರಬಲಗೊಳಿಸಿದೆ.
ಕೆಲವೇ ದಿನಗಳ ಅಂತರದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದೂ, ಅದಕ್ಕೂ ಮುಂಚೆ ಮೋದಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಇದು 2024 ರ ಚುನಾವಣೆಗೆ ಸಂಬಂಧಿಸಿದ ದೊಡ್ಡ ಬೆಳವಣಿಗೆಯಾಗಿದೆ. ಭಾರತೀಯ ಪ್ರಜಾಪ್ರಭುತ್ವವು ಈ ದೊಡ್ಡ ವಂಚನೆಗೆ ಸಾಕ್ಷಿಯಾಗಿರಲಿಲ್ಲ. ರಾಹುಲ್ ಗಾಂಧಿ ಚುನಾವಣಾ ಬಾಂಡ್ಗಳ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತಿದರು. ಇಂದು, ಅವರ ಆತಂಕ ನಿಜವೆಂದು ಸಾಬೀತಾಗಿದೆ. ನವೆಂಬರ್ 18, 2019 ರಂದು ರಾಹುಲ್ ಗಾಂಧಿ “ನವ ಭಾರತದಲ್ಲಿ ಲಂಚ ಹಾಗೂ ಅಕ್ರಮವಾದ ಕಮಿಷನ್ಗಳನ್ನು ಚುನಾವಣಾ ಬಾಂಡ್ಗಳು ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದು, ಇಂದು ಸುಪ್ರೀಂ ಕೋರ್ಟ್ ತೀರ್ಪು ಅವರ ಹೇಳಿಕೆಯನ್ನು ಸಮರ್ಥಿಸಿದಂತಿದೆ. ಅಂತೆಯೇ ಇಂದು ಈ ವಂಚನೆ ಸಾಕ್ಷಿ ಸಮೇತ ಸಿಕ್ಕಿಬಿದ್ದಿದೆ.
ಅತೀ ಮಹತ್ವದ, ಕಪ್ಪು ಹಣ ನಿರ್ಮೂಲನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದೆಂಬ ವಾದ ಮುಂದಿಟ್ಟು ಮೋದಿ ಸರ್ಕಾರ ತಂದ ಚುನಾವಣಾ ಬಾಂಡ್ಗಳ ಯೋಜನೆಯ ಕುರಿತು ಸುಪ್ರೀಂ ಕೋರ್ಟ್, ಅನಾಮಧೇಯ ಚುನಾವಣಾ ಬಾಂಡ್ಗಳು ಮಾಹಿತಿ ಹಕ್ಕು ಮತ್ತು ಆರ್ಟಿಕಲ್ 19(1)(ಎ) ಅನ್ನು ಉಲ್ಲಂಘಿಸುತ್ತದೆ, ಆದ್ದರಿಂದ ಚುನಾವಣಾ ಬಾಂಡ್ಗಳ ಯೋಜನೆಯನ್ನು ಅಸಂವಿಧಾನಿಕವೆಂದು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಚುನಾವಣಾ ಬಾಂಡ್ಗಳಲ್ಲಿನ ಕಪ್ಪು ಹಣದ ಅಪಾರದರ್ಶಕತೆ ಮತ್ತು ಬಳಕೆಯು ಈಗ ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ನಿಜವೆಂದು ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಗಳನ್ನು ಸ್ಪಷ್ಟವಾಗಿ ಲಾಭಕ್ಕಾಗಿ ನಡೆದ ವಹಿವಾಟು ಎಂದು ವಿವರಿಸುತ್ತದೆ, ಅಂದರೆ ಸಾವಿರಾರು ಕೋಟಿ ದೇಣಿಗೆ ತೆಗೆದುಕೊಂಡು, ಬಂಡವಾಳಶಾಹಿಗಳಿಗೆ ಲಕ್ಷ ಕೋಟಿ ಗಳಿಸಲು ಅವಕಾಶ ನೀಡಿ, ಉದ್ಯಮಿಗಳಿಗೆ ದೇಣಿಗೆಯ ಬದಲು ವಿವಿಧ ರೂಪದಲ್ಲಿ ಲಾಭ ತಲುಪಿಸಲಾಗಿದೆ.
ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ಹರಿದು ಬಂದಿದೆ. ಬಿಜೆಪಿ 6500 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಪಡೆದಿದೆ. 2022-23ರಲ್ಲಿ ಕಾರ್ಪೊರೇಟ್ಗಳು 850 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಅದರಲ್ಲಿ 719 ಕೋಟಿ ಬಿಜೆಪಿಗೆ ಬಂದಿದ್ದು ಕಾಂಗ್ರೆಸ್ ಕೇವಲ 79 ಕೋಟಿ ಮಾತ್ರ. ಈ ರೀತಿಯಾಗಿ ಹಲವಾರು 1000 ಕೋಟಿ ರೂಪಾಯಿಗಳ ದೇಣಿಗೆಗಳಿಂದ, ಬಿಜೆಪಿ ಹಣದ ವಿಷಯದಲ್ಲಿ ಅತ್ಯಂತ ಶಕ್ತಿಶಾಲಿ ಪಕ್ಷವಾಯಿತು, ಹಾಗೂ ಹಣಕಾಸಿನ ಬಲದ ವಿಷಯದಲ್ಲಿ ಭಾರತದ ರಾಜಕೀಯ ಪಕ್ಷಗಳು ದೊಡ್ಡ ಅಸಮತೋಲನವನ್ನು ಎದುರಿಸುತ್ತಿವೆ.
2018 ರ ಆರಂಭದಲ್ಲಿ ಮೋದಿ ಸರ್ಕಾರವು ಚುನಾವಣಾ ಬಾಂಡ್ ವಿಧೇಯಕವನ್ನು ಹಣಕಾಸು ವಿಧೇಯಕವಾಗಿ ಮಂಡಿಸಿತು. ರಾಜ್ಯಸಭೆಯಲ್ಲಿನ ಚರ್ಚೆ ಹಾಗೂ ಸದನದಲ್ಲಿ ಬಹುಮತ ಇಲ್ಲವಾದ್ದರಿಂದ ಹಣಕಾಸು ವಿಧೇಯಕವನ್ನಾಗಿ ಮಂಡಿಸಿ, ಲೋಕಸಭೆಯಲ್ಲಿನ ಬಹುಮತದ ಸಹಾಯದಿಂದ ಅಂಗೀಕರಿಸಿತ್ತು. RBI, ಕಾನೂನು ಮಂತ್ರಾಲಯ, ಚುನಾವಣಾ ಆಯೋಗ ಹಾಗೂ ಹಲವು ಪ್ರಮುಖ ಅಧಿಕಾರಿಗಳ ವಿರೋಧದ ಹೊರತಾಗಿಯೂ ಮೋದಿ ಸರ್ಕಾರ ಯೋಜನೆ ತರುವಲ್ಲಿ ಯಶಸ್ವಿಯಾಗಿತ್ತು. ಇದರ ಮೂಲಕ, ಭಾರತದಲ್ಲಿನ ಕಂಪನಿಗಳು, ವಿದೇಶಿ ಕಂಪನಿಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆಗಳನ್ನು ನೀಡುವ ಪರಿಪಾಠಕ್ಕೆ ನಾಂದಿ ಹಾಡಿತು.
ಸುಪ್ರೀಂ ಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಚುನಾವಣಾ ಬಾಂಡ್ಗಳ ಮೂಲಕದ ದೇಣಿಗೆಯ ವಿವರಗಳನ್ನು, ಬಾಂಡ್ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒಂದು ತಿಂಗಳಲ್ಲಿ ಒದಗಿಸುವಂತೆ ಗಡುವು ನೀಡಿ ಆದೇಶಿಸಿದೆ. ಇದರೊಂದಿಗೆ ಚುನಾವಣಾ ಆಯೋಗಕ್ಕೆ, ಮಾರ್ಚ್ 13ರೊಳಗೆ ವೆಬ್ಸೈಟ್ನಲ್ಲಿ ಈ ವಿವರಗಳನ್ನು ಪ್ರಕಟಿಸುವಂತೆ ನ್ಯಾಯಾಲಯ ಸೂಚಿಸಿದೆ. 2018 ರಿಂದ 2024ರ ಆರಂಭದವರೆಗೆ 16,518 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಲಾಗಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ 31 ರಿಂದ ಪ್ರಕರಣದ ನಿಯಮಿತ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಇದರಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಕೂಡ ಇದ್ದರು. ಈ ವೇಳೆ ಎರಡೂ ಕಡೆಯಿಂದ ವಾದ ಮಂಡಿಸಲಾಗಿ, ಎಲ್ಲ ಕಕ್ಷಿದಾರರ ಮಾತುಗಳನ್ನು ಗಂಭೀರವಾಗಿ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಎರಡು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರೂ, ಸರ್ವಾನುಮತದ ನಿರ್ಧಾರಕ್ಕೆ ಬಂದಿದೆ ಎಂದು ಚಂದ್ರಚೂಡ್ ಹೇಳಿದರು, ಒಂದು ಸ್ವತಃ CJI, ಇನ್ನೊಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಅಭಿಪ್ರಾಯ. “ತಾರ್ಕಿಕತೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆಯಾದರೂ, ಎರಡೂ ಒಂದೇ ತೀರ್ಮಾನಕ್ಕೆ ಬರುತ್ತವೆ.”ಎಂದು ಅವರು ಹೇಳಿದರು. ಕಂಪನಿ ಕಾಯ್ದೆ ತಿದ್ದುಪಡಿಗಳು ಸಂವಿಧಾನ ಬಾಹಿರ ಎಂದು ಪೀಠ ಹೇಳಿದೆ. ಕಪ್ಪುಹಣಕ್ಕೆ ಕಡಿವಾಣ ಹಾಕುವ ಹಾಗೂ ರಾಜಕೀಯ ಪಕ್ಷಗಳ ‘ಗೌಪ್ಯತೆಯ ಹಕ್ಕು’ಗಳ ನೆಪದಲ್ಲಿ, ಮಾಹಿತಿ ಹಕ್ಕುಗಳ ಚ್ಯುತಿ ಮತ್ತು ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಚುನಾವಣಾ ಬಾಂಡ್ ಅನುಷ್ಠಾನಗೊಳಿಸಲು, ಮೋದಿ ಸರ್ಕಾರ ಕಂಪನಿಗಳ ಕಾಯ್ದೆ, RBI ಕಾಯ್ದೆ, ಜನಪ್ರತಿನಿಧಿ ಕಾಯ್ದೆ, SBI ಕಾಯ್ದೆ ಸೇರಿದಂತೆ ಹಲವು ಕಾನೂನುಗಳಲ್ಲಿ ತಿದ್ದುಪಡಿ ಮಾಡಿದ್ದು, ಈ ಎಲ್ಲ ಕಾನೂನುಗಳಲ್ಲಿ ಮೋದಿ ಸರ್ಕಾರ ಮಾಡಿರುವ ತಿದ್ದುಪಡಿಗಳನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತೀರ್ಪನ್ನು ಓದಿದ, CJI “ರಾಜಕೀಯ ಪಕ್ಷಗಳು, ತಮ್ಮ ಹಣಕಾಸಿನ ಕೊಡುಗೆಗಳನ್ನು ಹೆಚ್ಚಿಸಿಕೊಳ್ಳಲು “ಕ್ವಿಡ್ ಪ್ರೊ ಕ್ವೊ” ವ್ಯವಸ್ಥೆಯಡಿ ದಾನಿಗಳ ನಿರೀಕ್ಷೆಗಳ ಅನುಗುಣವಾಗಿ, ಲಾಭಗಳನ್ನು ಪೂರೈಸಲಾಗುತ್ತಿದೆ” ಎಂದು ಹೇಳಿದರು. ಬಹುಪ್ರಮುಖವಾಗಿ ಈ ಯೋಜನೆಯಡಿಯಲ್ಲಿ ಆಡಳಿತ ಪಕ್ಷವು ದಾನಿಗಳ ಗುರುತನ್ನು ಹೊಂದಿದೆ, ಆದರೆ ಯಾವುದೇ ವಿರೋಧ ಪಕ್ಷವು ಅದನ್ನು ಹೊಂದಲು ಸಾಧ್ಯವಿಲ್ಲ ಎಂದು ಪೀಠವು ಗಮನಿಸಿತು. ಹಣ ಮತ್ತು ರಾಜಕೀಯದ ನಡುವಿನ ನಿಕಟ ಸಂಬಂಧದಿಂದಾಗಿ, ಹಣಕಾಸಿನ ಕೊಡುಗೆಗಳು “ಕ್ವಿಡ್ ಪ್ರೊ ಕ್ವೊ () ವ್ಯವಸ್ಥೆಗಳಿಗೆ ಕಾರಣವಾಗಬಹುದು” ಎಂದು ನ್ಯಾಯಾಲಯವು ಹೇಳಿದೆ, ಕಾರ್ಪೊರೇಟ್ ದೇಣಿಗೆ ಮಿತಿಗಳನ್ನು ಮರುಸ್ಥಾಪಿಸಿದ ಕಾರಣ, ಕಂಪನಿಗಳು ಮತ್ತು ವ್ಯಕ್ತಿಗಳನ್ನು ಸಮಾನವಾಗಿ ಪರಿಗಣಿಸುವುದು “ನಿರ್ವಿವಾದವಾಗಿ ನಿರಂಕುಶವಾಗಿದೆ” ಎಂದು ಕೋರ್ಟ್ ಹೇಳಿದೆ. “ರಾಜಕೀಯ ಕೊಡುಗೆಗಳ ಮೂಲಕ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಕಂಪನಿಯ ಸಾಮರ್ಥ್ಯವು ಒಬ್ಬ ವ್ಯಕ್ತಿಗೆ ಹೋಲಿಸಿದರೆ ತುಂಬಾ ಹೆಚ್ಚಾಗಿದೆ… ಕಂಪನಿಗಳು ನೀಡಿದ ಕೊಡುಗೆಗಳು ಸಂಪೂರ್ಣವಾಗಿ ವ್ಯಾಪಾರ ವಹಿವಾಟುಗಳು ಪ್ರತಿಯಾಗಿ ಲಾಭಗಳನ್ನು ಪಡೆಯುವ ಉದ್ದೇಶದಿಂದ ಮಾಡಿರುತ್ತವೆ” ಎಂದು ಉನ್ನತ ನ್ಯಾಯಾಲಯದ ಆದೇಶವು ಹೇಳಿದೆ. ನ್ಯಾಯಾಲಯ ಅತೀ ಮಹತ್ವದ ತೀರ್ಪು ಹೊರಡಿಸಿದ್ದು, ಇದು ಮೇ ವೇಳೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ. “ರಾಜಕೀಯ ಪಕ್ಷಗಳು ಚುನಾವಣೆಗೆ ಮುಂಚಿತವಾಗಿ ಈಗಾಗಲೇ ದೊಡ್ಡ ಹಣವನ್ನು ಗಳಿಸಿರಬೇಕು, ಆದರೆ ಅವರು ಮುಂಬರುವ ದಿನಗಳಲ್ಲಿ 10 ಪಟ್ಟು ಹೆಚ್ಚು ಹಣವನ್ನು ಗಳಿಸಬಹುದೆಂದು ಅಭಿಪ್ರಾಯ ಪಟ್ಟ ಪೀಠವು, ತತ್ಕ್ಷಣದಿಂದ ಮಾರಾಟವನ್ನು ನಿಲ್ಲಿಸುವಂತೆ, ಹಾಗೂ ಅವಧಿ ಮೀರದ ಬಳಸದೇ ಇರುವ ಬಾಂಡ್ಗಳನ್ನು ಹಿಂದಿರುಗಿಸುವಂತೆ ಆದೇಶಿಸಿದೆ.
ರಾಜಕೀಯ ಪಕ್ಷಗಳಿಗೆ ಯಾರು ಹಣ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಸಾರ್ವಜನಿಕರ ಹಕ್ಕನ್ನು ಈ ಯೋಜನೆ ಅಡ್ಡಿಪಡಿಸುತ್ತದೆ ಎಂಬ ಕಾರಣಕ್ಕಾಗಿ ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳಿಂದ ಈ ರಹಸ್ಯ ಚುನಾವಣಾ ನಿಧಿ ವ್ಯವಸ್ಥೆಯನ್ನು ಪ್ರಶ್ನಿಸಲಾಗಿತ್ತು. ಸುಪ್ರೀಂ ಕೋರ್ಟ್ನಲ್ಲಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ಮತ್ತು ಸರ್ಕಾರೇತರ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಯೋಜನೆಯನ್ನು ಪ್ರಶ್ನಿಸಿದ್ದರು. ಚುನಾವಣಾ ಬಾಂಡ್ ಯೋಜನೆಯು ಅಕ್ರಮ ಹಾಗೂ ಅಸಾಂವಿಧಾನಿಕವೆಂದು ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.