ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು, ಸ್ಪೇಸ್ ಎಕ್ಸ್ ಹಾಗೂ ಸಾಮಾಜಿಕ ಜಾಲತಾಣ ಎಕ್ಸ್‌ನ ಮಾಲಿಕ ಎಲೋನ್ ಮಸ್ಕ್ ಅವರು ಅಭಿನಂದಿಸಿದ್ದಾರೆ. ಈ ಅಭಿನಂದನಾ ಪೋಸ್ಟ್ ಎಕ್ಸ್ ಖಾತೆಯಲ್ಲಿ ಮಿಂಚಿನಂತೆ ಹರಿದಾಡಿ ವೈರಲ್ ಆಗಿದೆ. ಯಾಕೆ ಮಸ್ಕ್ ಅವರು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ?
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳನ್ನು ರಾಜಕೀಯಕ್ಕಾಗಿ ಉಪಯೋಗಿಸಿದ ಭಾರತದ ಮೊದಲ ರಾಜಕಾರಣಿ ಎಂದರೆ ತಪ್ಪಾಗಲಾರದು. ಇವರು ಸಾಮಾಜಿಕ ಜಾಲತಾಣದ ಮೂಲಕ ವಿಶ್ವದ ಮೂಲೆ ಮೂಲೆಗೆ ತಲುಪಿದವರು. ಈಗ ಇವರ ಎಕ್ಸ್ ಖಾತೆಯು ವಿಶ್ವದ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವ ನಾಯಕ ಎಂಬ ಗರಿಮೆ ತಂದಿದೆ. ಎಕ್ಸ್ ಖಾತೆಯಲ್ಲಿ ನರೇಂದ್ರ ಮೋದಿಯವರಿಗೆ ಬರೋಬ್ಬರಿ 100 ಮಿಲಿಯನ್ ಅಂದರೆ 10 ಕೋಟಿ ಜನರ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಇದಕ್ಕಾಗಿ ಎಕ್ಸ್ ಮಾಲಿಕ ಎಲೋನ್ ಮಸ್ಕ್ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಮೊದ ಮೊದಲು ಕೇವಲ ಅನಿಸಿಕೆ ಹಾಗೂ ಹೊಸ ವ್ಯಕ್ತಿಗಳ ಪರಿಚಯಕ್ಕೆ ಇದ್ದ ವೇದಿಕೆ ಆಗಿತ್ತು. ತದನಂತರ ಇದು ರಾಜಕೀಯದ ಯುದ್ಧ ಭೂಮಿಯಾಗಿ ಬದಲಾಯಿತು. ಚುನಾವಣಾ ಪ್ರಚಾರಗಳು ಬಹಿರಂಗವಾಗಿ ಹೇಗೆ ನಡೆಯುತ್ತದೆಯೋ, ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ನಡೆಯುತ್ತಿದೆ. ಪ್ರಸ್ತುತ ಸ್ಥಿತಿಯಲ್ಲಿ ಪ್ರತಿಯೊಬ್ಬ ರಾಜಕಾರಣಿ ತನ್ನ ಪ್ರಭಾವವನ್ನು ಬಿತ್ತರಿಸಲು ಸಾಮಾಜಿಕ ಜಾಲತಾಣ ಅತಿ ಮುಖ್ಯವಾದ ಮಾಧ್ಯಮವಾಗಿದೆ.