ಮುನಿರತ್ನಗೆ ಮುಗಿಯದ ಸಂಕಷ್ಟ: ತನಿಖೆ ಕೈಗೆತ್ತಿಕೊಂಡ ಎಸ್ಐಟಿ! ಮುಂದೇನು ಗತಿ?!
ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿರುವ ಹಲವು ಗಂಭೀರ ಆರೋಪಗಳ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ಗೆ ವಹಿಸುವ ಮೂಲಕ ರಾಜ್ಯ ಸರ್ಕಾರ ಗಂಭೀರ ನಿರ್ಧಾರ ಕೈಗೊಂಡಿದೆ.
ಜಾತಿ ನಿಂದನೆ, ಅತ್ಯಾಚಾರ ಮತ್ತು ಲಂಚದ ಆರೋಪಗಳನ್ನು ಎದುರಿಸುತ್ತಿರುವ ಮುನಿರತ್ನ ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಒಕ್ಕಲಿಗ ಕಾಂಗ್ರೆಸ್ ಜನಪ್ರತಿನಿಧಿಗಳ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ರಚನೆಯಾಗಿರುವ ಎಸ್‌ಐಟಿ ತಂಡದಲ್ಲಿ ಕೇಂದ್ರ ವಲಯ ಪೊಲಿಸ್ ಮಹಾ ನಿರೀಕ್ಷಕ ಲಭುರಾಮ್, ರೈಲ್ವೇ ಪೊಲೀಸ್ ಅಧೀಕ್ಷಕಿ ಸೌಮ್ಯಲತ ಮತ್ತು ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ಸೇರಿದ್ದಾರೆ.
ಈ ಎಸ್‌ಐಟಿ ತನಿಖೆ ಮುನಿರತ್ನ ಅವರಿಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. ಹಲವು ಗಂಭೀರ ಆರೋಪಗಳಿಗೆ ಈಗ ಎಸ್‌ಐಟಿ ತನಿಖೆ ಎದುರಾಗುತ್ತಿದ್ದು, ಮುನಿರತ್ನ ಅವರ ರಾಜಕೀಯ ಭವಿಷ್ಯ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.