ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಜೇಮ್ಸ್ ಆಂಡರ್ಸನ್.

ಇಂಗ್ಲೆಂಡ್: ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ಅಧ್ಯಾಯವನ್ನು ರಚಿಸಿದ, ಖ್ಯಾತ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ. ಸತತ ಎರಡು ದಶಕಗಳಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿಯಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಇವರ ನಿವೃತ್ತಿಗೆ ಕ್ರಿಕೆಟ್ ದಿಗ್ಗಜರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕ್ರಿಕೆಟ್ ದೇವರು ಎಂದು ಖ್ಯಾತಿಯಾದ, ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಎಕ್ಸ್ ಖಾತೆಯನ್ನು ಉಪಯೋಗಿಸುವ ಮೂಲಕ ಜೇಮ್ಸ್ ಆಂಡರ್ಸನ್ ಅವರ ಕುರಿತು ಬರೆದುಕೊಂಡಿದ್ದಾರೆ. ಜೇಮ್ಸ್ ಆಂಡರ್ಸನ್ ಅವರ ಬೌಲಿಂಗ್ ವೀಕ್ಷಿಸಲು ಅತ್ಯಂತ ಸಂತೋಷವಾಗುತ್ತಿತ್ತು, ಆಂಡರ್ಸನ್ ಅವರು ಹಲವು ಪೀಳಿಗೆಗಳಿಗೆ ಸ್ಪೂರ್ತಿ ನೀಡಿದ್ದಾರೆ ಎಂದು ತೆಂಡೂಲ್ಕರ್ ಅವರು ಹೇಳಿಕೊಂಡಿದ್ದಾರೆ.
ಜೇಮ್ಸ್ ಆಂಡರ್ಸನ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಬರೋಬ್ಬರಿ 40,000ಕ್ಕೂ ಹೆಚ್ಚು ಬಾಲ್‌ಗಳನ್ನು ಎಸೆದು ದಾಖಲೆ ನಿರ್ಮಿಸಿದ್ದಾರೆ. ತಮ್ಮ 21 ವರ್ಷಗಳ ದೀರ್ಘ ಅವಧಿಯಲ್ಲಿ 704 ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತದ ವಿರುದ್ಧ 39 ಟೆಸ್ಟ್ ಗಳನ್ನು ಆಡಿದ ಆಂಡರ್ಸನ್ ಅವರು, 149 ಭಾರತೀಯ ಕ್ರಿಕೆಟಿಗರ ವಿಕೆಟ್ ಗಳನ್ನು ಪಡೆದಿದ್ದಾರೆ.