‘ರೈತರ ಚಾಂಪಿಯನ್’ ಗೆ ಈ ಬಾರಿಯ ಭಾರತರತ್ನ.
ಭಾರತದ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶದ 5ನೇ ಪ್ರಧಾನಮಂತ್ರಿ, ‘ರೈತರ ಚಾಂಪಿಯನ್’ ಎಂದೇ ಖ್ಯಾತಿ ಪಡೆದಿರುವ ಚೌಧರಿ ಚರಣ್ ಸಿಂಗ್ ಅವರಿಗೆ 2024ರ ಭಾರತರತ್ನ ಪ್ರಶಸ್ತಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.
1902ರ ಡಿಸೆಂಬರ್ 23ರಂದು, ಬ್ರಿಟಿಷ್ ಭಾರತದ ಯುನೈಟೆಡ್ ಪ್ರಾವಿನ್ಸಸ್ ನಲ್ಲಿ ಜನಿಸಿದ ಚೌದರಿ ಚರಣ್ ಸಿಂಗ್ ಅವರು ಜಾಟ್ ಸಮುದಾಯಕ್ಕೆ ಸೇರಿದವರು. ಇವರ ಪೂರ್ವಜರಾದ ರಾಜಾ ನಹರ್ ಸಿಂಗ್ ಅವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ನಾಯಕರು.
ಅದೇ ರೀತಿ ಚೌಧರಿ ಚರಣ್ ಸಿಂಗ್ ಅವರು ಕೂಡ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರು. ಗಾಂಧೀಜಿ ಅವರ ಅಹಿಂಸೆ ಮಾರ್ಗದಲ್ಲಿ ನಡೆದವರು ಚೌಧರಿ ಚರಣ್ ಸಿಂಗ್. ಆದರೆ ಚರಣ್ ಸಿಂಗ್ ಅವರು ಸ್ವಾತಂತ್ರ್ಯ ಭಾರತದಲ್ಲಿ ನೆಹರೂ ಅವರ ಸೋವಿಯತ್ ರೀತಿಯ ಆರ್ಥಿಕ ಸುಧಾರಣೆಯನ್ನು ವಿರೋಧಿಸಿದರು. ಸಿಂಗ್ ಅವರು ಉತ್ತರಪ್ರದೇಶದ ಐದನೇ ಮುಖ್ಯಮಂತ್ರಿಯಾಗಿದ್ದರು. ತದನಂತರ ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ಗೃಹ ಸಚಿವ, ಹಣಕಾಸು ಸಚಿವ, ಹಾಗೂ ದೇಶದ ಮೂರನೇ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಚೌಧರಿ ಚರಣ್ ಸಿಂಗ್ ಅವರು 1979ರಲ್ಲಿ ದೇಶದ ಐದನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರು.
ಚೌಧರಿ ಚರಣ್ ಸಿಂಗ್ ಅವರು ದಿನಾಂಕ 29, ಮೇ 1987ರಲ್ಲಿ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಜೀವನ ಘಟ್ಟದಲ್ಲಿ ಬಹುಪಾಲು ರೈತರಿಗಾಗಿ ಬದುಕಿದ ಇವರು, ರೈತರ ನಾಯಕ ಎಂದೇ ಖ್ಯಾತಿ ಹೊಂದಿದ್ದರು.