ಮುಕ್ತಾಯದ ಹಂತದಲ್ಲಿ ‘ಫಾದರ್’ ಸಿನಿಮಾ: ಡಾರ್ಲಿಂಗ್ ಕೃಷ್ಟ ಹಾಗೂ ಪ್ರಕಾಶ್ ರಾಜ್ ಕಾಂಬಿನೇಷನ್ ಹೇಗಿರಬಹುದು..?!

ಬೆಂಗಳೂರು: ಐದು ಸಿನಿಮಾಗಳನ್ನು ಘೋಷಿಸಿದ್ದ ನಿರ್ದೇಶಕ ಆರ್. ಚಂದ್ರು, ಅವರ ಕನಸಿನ ಮೊದಲ ಚಿತ್ರ ‘ಫಾದರ್’ ನ ಶೂಟಿಂಗ್ ಮುನ್ನಡೆಯುತ್ತಿದ್ದು, ಇದೀಗ ಕೊನೆಯ ಹಂತವನ್ನು ತಲುಪಿದೆ. ರಾಜ್ ಮೋಹನ್ ನಿರ್ದೇಶನದ ಈ ಸಿನಿಮಾದ ತೀವ್ರ ಕುತೂಹಲ ಮೂಡಿಸುವ ಕತೆ, ಚಂಪಕಧಾಮಸ್ವಾಮಿ ದೇವಾಲಯದ ಆಳವಾದ ಸಾಂಸ್ಕೃತಿಕ ಹಿನ್ನೆಲೆಯಲ್ಲಿಯೇ ಚಿತ್ರೀಕರಣಗೊಳ್ಳುತ್ತಿದೆ.
ಐತಿಹಾಸಿಕ ಚಂಪಕಧಾಮಸ್ವಾಮಿ ದೇವಾಲಯದ ಮುಂಭಾಗದಲ್ಲಿ ನೂರಾರು ಜೂನಿಯರ್ ಕಲಾವಿದರು ಸೇರಿಕೊಂಡು ಸಾಹಸ ದೃಶ್ಯಗಳನ್ನು ಚಿತ್ರಿಸುತ್ತಿರುವ ‘ಫಾದರ್’ ತಂಡಕ್ಕೆ ವಿನೋದ್ ಮಾಸ್ಟರ್ ಅವರ ಸಾಹಸ ನಿರ್ದೇಶನವಿದೆ. ಸುಜ್ಞಾನಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕೆ ಸೊಗಸನ್ನು ಹೆಚ್ಚಿಸುತ್ತಿದ್ದು, ಡಾರ್ಲಿಂಗ್ ಕೃಷ್ಟ್ ಮತ್ತು ಪ್ರಕಾಶ್ ರಾಜ್ ಅವರ ತಂದೆ-ಮಗನ ಬಾಂಧವ್ಯವನ್ನು ಬಿಂಬಿಸುವ ಹೃದಯಸ್ಪರ್ಶಿ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿರಲಿದೆ ಎನ್ನಲಾಗಿದೆ.
ಶೂಟಿಂಗ್ ಮುಗಿಯುತ್ತಿದ್ದಂತೆಯೇ, ತಂಡವು ವಾರಣಾಸಿಗೆ ಪ್ರವಾಸ ಬೆಳೆಸಿ ಫಾದರ್ ಚಿತ್ರಕ್ಕೆ ಕಮರ್ಷಿಯಲ್ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಿದ್ದಾರೆ. ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾದ ಹೊಸ ಸುದ್ದಿಗಳಿಗಾಗಿ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.