ದೀಪಾವಳಿಯಂದು ಬರುತ್ತಿದೆ, ಶಿವಣ್ಣನ ಪುತ್ರಿಯ ಚೊಚ್ಚಲ ಚಿತ್ರ.

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ಮೊಟ್ಟಮೊದಲ ಸಿನಿಮಾ ‘ಫೈರ್ ಫ್ಲೈ’ ಬೆಳಕಿನ ಹಬ್ಬ ದೀಪಾವಳಿಗೆ ಬಿಡುಗಡೆಗೊಳಲಿದೆ. ನಿವೇದಿತಾ ಅವರ ಒಡೆತನದ ‘ಶ್ರೀ ಮತ್ತು ಸಿನಿ ಸರ್ವಿಸಸ್’ ಬ್ಯಾನರ್ ಮೂಲಕ ಈ ಚಿತ್ರ ಹೊರ ಬರುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ನಿವೇದಿತಾ ಶಿವರಾಜಕುಮಾರ್ ಅವರು “ವೆಬ್ ಸೀರೀಸ್ ಮಾಡಿದ ಮೇಲೆ ಸಿನಿಮಾ ಮಾಡಬೇಕು ಅಂತ ತುಂಬಾ ಆಸಕ್ತಿ ಇತ್ತು. ವಂಶಿವರು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಒಳ್ಳೆ ಟೆಕ್ನಿಕಲ್ ಟೀಮ್ ತೆಗೆದುಕೊಂಡು ಮಾಡಬೇಕು ಎಂದು ಚಿತ್ರ ಮಾಡಿದ್ದೇವೆ. ಕಥೆ ತುಂಬಾ ಸರಳವಾಗಿದ್ದರೂ, ಅವರು ಕಥೆ ಹೇಳಿದ ರೀತಿ ತುಂಬಾ ಇಷ್ಟವಾಯಿತು. ಹೊಸ ಪ್ರಯೋಗ ಮಾಡಿದ್ದೇನೆ. ಕೊನೆಯ ಹಂತದ ಚಿತ್ರೀಕರಣ ಶುರು ಮಾಡುತ್ತಿದ್ದೇವೆ. ದೀಪಾವಳಿಗೆ ಸಿನಿಮಾ ಬಿಡುಗಡೆಯಾಗಲಿದೆ.” ಎಂದರು.
ಚಿತ್ರದ ನಟ ಹಾಗೂ ನಿರ್ದೇಶಕರಾದ ವಂಶಿಯವರು ಮಾತನಾಡಿ, “ಎಲ್ಲರ ಜೀವನದಲ್ಲಿ ಒಂದು ಪಾಯಿಂಟ್ ಇರುತ್ತದೆ. ನಾವು ಡೆಡ್ ಎಂಡ್ ಅಂದುಕೊಂಡಿರುತ್ತೇವೆ. ಒಂದು ಹೋಪ್ ಹಾಗೂ ಮೋಟಿವೇಶನ್ ಗೆ ಕಾಯುತ್ತ ಇರುತ್ತೇವೆ. ಆ ಟೈಮ್ ನಲ್ಲಿ ಹೋಪ್ ಎಂಬ ಬೆಳಕು ಎಲ್ಲಿಂದಲೂ ಬರಲ್ಲ ನಮ್ಮಿಂದಲೇ ಬರಬೇಕು ಎಂಬುದೇ ಫೈರ್ ಫ್ಲೈ. ಅದಕ್ಕೆ ಈ ಟೈಟಲ್ ಇಟ್ಟಿದ್ದೇವೆ. ನಿವೇದಿತಾ ಮೇಡಂಗೆ ಧನ್ಯವಾದ. ಇದಕ್ಕಿಂತ ಮೊದಲು ಎರಡು ಮೂರು ಕಥೆ ಚರ್ಚೆ ಮಾಡಿದ್ದೆವು. ಆದರೆ ಅವರು ರಿಜೆಕ್ಟ್ ಮಾಡಿದ್ದರು. ಈ ಕಥೆ ಒಪ್ಪಿಕೊಂಡಿದ್ದಕ್ಕೆ ನನಗೆ ಖುಷಿಯಾಯಿತು. ಯಾಕೆಂದರೆ ನನ್ನಲ್ಲಿ ಕೆಲ ಬದಲಾವಣೆಯಾಯಿತು. ಟೆಕ್ನಿಕಲ್ ಸ್ಟ್ರಾಂಗ್ ಹಾಗೂ ಸಿಂಪಲ್ ಸಿನಿಮಾದೊಂದಿಗೆ ಬರುತ್ತಿದ್ದೇವೆ. ಇದೇ ದೀಪಾವಳಿಗೆ ಚಿತ್ರ ಬರುತ್ತಿದೆ. ಇಡೀ ಸಿನಿಮಾದಲ್ಲಿ ನಾನು ಒಬ್ಬನೇ ಹೊಸಬ. ಆದರೆ ಆ ರೀತಿ ಫೀಲ್ ನನಗೆ ಬಂದೇ ಇಲ್ಲ. ಇಷ್ಟು ಜನ ಸಿಕ್ಕಿದ್ದು, ಶ್ರೀಮುತ್ತು ಶನಿ ಸರ್ವಿಸ್ ನಿಂದ. ನಾನು ಬೇರೆ ನಿರ್ಮಾಪಕರ ಜೊತೆ ಕೈಜೋಡಿಸಿದ್ದರೆ ಡೇಟ್ಸ್ ಕೂಡ ಸಿಗುತ್ತಿರಲಿಲ್ಲ.” ಎಂದರು.
ವಂಶಿವರು ಈ ಮೊದಲು ಪುನೀತ್ ರಾಜಕುಮಾರ್ ಅವರ ‘ಪಿಆರ್‌ಕೆ ಪ್ರೊಡಕ್ಷನ್’ ನಿರ್ಮಾಣದ ಮಾಯಾ ಬಜಾರ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬೆಂಟಗನ್ ಚಿತ್ರದಲ್ಲಿಯೂ ಕೂಡ ಪ್ರಮುಖ ಪಾತ್ರ ಒಂದರಲ್ಲಿ ಅವರು ನಡೆಸಿದ್ದರು. ಈಗ ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರದಲ್ಲಿ ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣ ಪ್ರಮಾಣದ ಹೀರೋವಾಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ.
‘ಫೈರ್ ಫ್ಲೈ’ ಚಿತ್ರಕ್ಕೆ ಜಯರಾಮ್ ಅವರು ಸಹಾಯಕ ನಿರ್ದೇಶಕರಾಗಿ, ಅಭಿಲಾಶ್ ಕಳತ್ತಿ ಅವರು ಛಾಯಾಗ್ರಹಕರಾಗಿ, ಚರಣ್ ರಾಜ್ ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.