ಯಶ್ ಚಿತ್ರದ ವಿರುದ್ಧ ಅರಣ್ಯ ಇಲಾಖೆ ಗರಂ: ‘ಟಾಕ್ಸಿಕ್’ ಮಾಡಿದ ತಪ್ಪೇನು..?!
ಬೆಂಗಳೂರು: ‘ಕೆಜಿಎಫ್’ ಹಿಟ್ ನಂತರ ರಾಕಿಂಗ್ ಸ್ಟಾರ್ ಯಶ್ ತಮ್ಮ ಹೊಸ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗುತ್ತಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ ಯಶ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಆದರೆ, ಇದೀಗ ಈ ಚಿತ್ರಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಂದ ಗಂಭೀರ ಆರೋಪಿ ಎದುರಾಗಿದೆ.
ಅರಣ್ಯ ಭೂಮಿಯಲ್ಲಿ ಟಾಕ್ಸಿಕ್ ಶೂಟಿಂಗ್‌ಗೆ ಸಂಬಂಧಿಸಿದ ಗಂಭೀರ ಆರೋಪ:
ಈಶ್ವರ್ ಖಂಡ್ರೆ ಟ್ವೀಟ್ ಮೂಲಕ ಟಾಕ್ಸಿಕ್ ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, “ಅರಣ್ಯ ಭೂಮಿಯನ್ನು ಹಾಳುಮಾಡಿದ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಬೆಂಗಳೂರಿನ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ನಡೆಸುವ ಮೂಲಕ ನೂರಾರು ಮರಗಳನ್ನು ಕಡಿದು ಹಾನಿಗೊಳಿಸಿರುವುದಾಗಿ ಖಂಡ್ರೆ ಆರೋಪಿಸಿದ್ದಾರೆ.
ಸ್ಯಾಟೆಲೈಟ್ ಚಿತ್ರಗಳಲ್ಲಿ ಸ್ಪಷ್ಟವಾಗಿ ಧೃಡಪಟ್ಟ ಅಕ್ರಮ ಕೃತ್ಯ:
ಅರಣ್ಯದಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಪರಿಸರ ಹಾನಿ ಮಾಡಿದ ಆರೋಪದ ಹಿನ್ನೆಲೆ, ಈಶ್ವರ್ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. “ನಮ್ಮ ಅರಣ್ಯವನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಅಕ್ರಮ ಕೃತ್ಯಗಳಿಗೆ ಯಾರೂ ಬಲಿಯಾಗಬಾರದು,” ಎಂದು ಖಂಡ್ರೆ ಖಡಕ್ ಸಂದೇಶ ನೀಡಿದ್ದಾರೆ.
ಟಾಕ್ಸಿಕ್ ಸಿನಿಮಾದ ರಿಲೀಸ್ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಗೊಂದಲ:
ಕೆಜಿಎಫ್ 2 ನಂತರ ಯಶ್ ಟಾಕ್ಸಿಕ್ ಸಿನಿಮಾಗೆ ಕೈ ಜೋಡಿಸಿದ್ದರಿಂದ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. 2025ರಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಈ ವಿವಾದಗಳಿಂದಾಗಿ ತಡವಾಗಬಹುದೆಂಬ ಗೊಂದಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.