“ನಾಗೇಂದ್ರ ಹಿಂದಿರುವ ಸೂತ್ರಧಾರಿಯನ್ನು ಸಹ ಪತ್ತೆ ಹಚ್ಚಬೇಕು”- ಶ್ರೀರಾಮುಲು.
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಇಂದು ಮಾಜಿ ಸಚಿವರಾದ ಶ್ರೀರಾಮುಲು ಅವರು ದೊಡ್ಡ ಹೇಳಿಕೆ ನೀಡಿದ್ದಾರೆ. “ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್ ಅವರ ಖಾತೆಗೆ ನಿಗಮದ 80 ಲಕ್ಷ ರೂ. ನೇರವಾಗಿ ವರ್ಗಾವಣೆಯಾಗಿದೆ. ವಾಲ್ಮೀಕಿ ಸಮುದಾಯದ ಹಣ ನುಂಗಿದವರನ್ನು ಹಾಗೂ ಹಗರಣದ ಮೂಲ ಸೂತ್ರಧಾರರು ಯಾರೇ ಇದ್ದರೂ ಶೀಘ್ರವೇ ಬಂಧಿಸಬೇಕು.” ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಯಾರು ಆ ಸೂತ್ರಧಾರಿ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಶ್ರೀರಾಮುಲು ನೀಡಿಲ್ಲ.
ನಿನ್ನೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಾಗಿಟ್ಟ ನಿಧಿಯನ್ನು, ತಮ್ಮ 5 ಗ್ಯಾರಂಟಿಗಳನ್ನು ಪೂರ್ಣಗೊಳಿಸಲು ಬಳಸಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ, ಏಳು ದಿನದೊಳಗಾಗಿ ವರದಿಯನ್ನು ನೀಡುವಂತೆ ಆದೇಶ ಮಾಡಿದೆ. ಈ ಪತ್ರದಲ್ಲಿ ರಾಜ್ಯ ಸರ್ಕಾರ ಸರಿಸುಮಾರು 15,000 ಕೋಟಿ ರೂಪಾಯಿಯನ್ನು ಎಸ್‌ಸಿ, ಎಸ್‌ಟಿ ನಿಧಿಯಿಂದ ಬಳಸಿಕೊಂಡಿದೆ ಎಂದು ಉಲ್ಲೇಖವಾಗಿದೆ.
ವಾಲ್ಮೀಕಿ ನಿಗಮದ ಹಗರಣದ ಮುಖ್ಯ ಆರೋಪಿಯಾದ ನಾಗೇಂದ್ರ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇದರ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ನಾಗೇಂದ್ರ ಅವರ ಆಪ್ತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.