ಸಾವು ಗೆದ್ದ ಸಾತ್ವಿಕನ ಮನದಾಳದಿಂದ…….
ವಿವೇಕಾನಂದ. ಎಚ್. ಕೆ. 9844013068……
ಅಮ್ಮ ಮೆಣಸಿನಕಾಯಿ ಬಜ್ಜಿ ಕೊಟ್ಟಿದ್ರು, ಅದನ್ನ ತಿನ್ಕೊಂಡು ಅಲ್ಲಿ ಒಂದು ಕೋಳಿ ಮರಿ ಹೋಗ್ತಾ ಇತ್ತು. ಅದನ್ನು ನೋಡಿ ಆ ಕಡೆ ಹೋಗ್ತಾ ಇದ್ದೆ. ಏನಾಯ್ತೋ ಏನೋ ಭೋರ್ವೆಲ್ ಪೈಪ್ ಒಳಗೆ ಬಿದೋಗ್ಬಿಟ್ಟೆ…….
ಕೆಳಗಡೆಗೆ ಹೋಗಿಬಿಟ್ಟೆ. ಕಾಲು ಮೇಲೆ ತಲೆ ಕೆಳಗೆ. ನಂಗೆ ಭಯ ಆಗ್ಬಿಡ್ತು. ಏನಪ್ಪ ಮಾಡೋದು. ಯಾರು ನೋಡಿಲ್ವೇ ನಾನು ಬಿದ್ದಿರೋದು. ಅಮ್ಮ ಯಾಕೆ ಇನ್ನೂ ಬರಲಿಲ್ಲ, ಚಿಕ್ಕಪ್ಪ ಯಾಕೆ ಬರಲಿಲ್ಲ, ಅಕ್ಕ ಯಾಕೆ ಬರಲಿಲ್ಲ, ಅಪ್ಪ ಬಂದ್ರೆ ಹೊಡಿಬಹುದು, ಏನ್ ಮಾಡೋದು ಈಗ….
ತುಂಬಾ ಭಯ ಆಗ್ತಾ ಇತ್ತು. ಯಾರು ಯಾಕೆ ಬರ್ತಾ ಇಲ್ಲ ಅಂತ ಯೋಚನೆ ಮಾಡ್ತಾ ಇದ್ದೆ. ಅಳು ಬಂತು. ಜೋರಾಗಿ ಅತ್ತುಬಿಟ್ಟೆ. ಆಮೇಲೆ ತಲೆ ಕೆಳಗಡೇ ಇದ್ರು ಸ್ವಲ್ಪ ಹೊತ್ತಿಗೆ ನಿದ್ದೆ ಮಾಡಿದೆ. ಎಚ್ಚರ ಆದಾಗ ಹಾಂಗೇ ಇದ್ದೇ. ಈಗ ಭಯ ಇನ್ನೂ ಜಾಸ್ತಿ ಆಯ್ತು. ಗುಮ್ಮ ಬಂದ್ರೆ ಏನ್ಮಾಡೋದು, ಒಬ್ಬನೇ ಇದ್ದೀನಿ, ಅಮ್ಮನೂ ಇಲ್ಲ ಅಂತ…
ಏನು ಮಾಡೋಕೆ ಆಗ್ತಾ ಇಲ್ಲ, ಯಾಕೆ ಯಾರು ನೋಡಿಲ್ವಾ, ಸ್ವಲ್ಪ ಹೊತ್ತು ನಿದ್ದೆ ಮಾಡೋದು, ಸ್ವಲ್ಪ ಹೊತ್ತು ಅಳೋದು, ಹಾಗೆ ಮಲಗೋದು, ಹೊಟ್ಟೆ ಬೇರೆ ಹಸಿವಾಯ್ತು. ಮೊಮ್ಮು ಕೊಡೋರು ಯಾರು ಇರಲಿಲ್ಲ. ಮತ್ತೆ ಜೋರಾಗಿ ಅತ್ತುಬಿಟ್ಟೆ. ಅಮ್ಮ ಅಪ್ಪ ಅಂತ ಕೂಗಿದೆ….
ಸ್ವಲ್ಪ ಹೊತ್ತಿನ ನಂತರ ಯಾರೋ ಕಾಲ್ಗೆ ಏನು ಕಟ್ಟಿದಂಗೆ ಆಯ್ತು, ಯಾರು ಇರಬಹುದು, ಯಾಕೆ ನನ್ನ ತಗೋತಾ ಇಲ್ಲ ಅಂತ ಯೋಚನೆ ಮಾಡ್ತಾ ಇದ್ದೆ. ಸ್ವಲ್ಪ ಹೊತ್ತಾದ್ಮೇಲೆ ಅದೇನು ತಣ್ಣಗೆ ಗಾಳಿ ಬಿಟ್ರು, ಹೋ ಯಾರು ಬಂದಿದ್ದಾರೆ ಅನ್ಕೊಂಡೆ. ಈಗ ನನ್ನ ಎಳ್ಕೋತಾರೆ ಅಂದ್ಕೊಂಡೆ ಇಲ್ಲ ಯಾರು ಎಳಕೊಂಡೇ ಇಲ್ಲ ಮತ್ತೆ ಭಯ ಆಯಿತು…….
ಏನೋ ಆಚೆಕಡೆ ಸೌಂಡ್ ಆಗ್ತಾ ಇತ್ತು, ಯಾವುದೋ ಗಾಡಿ ಹೋಗ್ತಾ ಇದ್ದಂಗೆ, ಯಾರೋ ಮಾತಾಡ್ದಂಗೆ, ಓ ಎಲ್ಲಾ ಬಂದಿದ್ದಾರೆ ಅಂತ ಅನ್ಕೊಂಡೆ, ಎಷ್ಟೊತ್ತಾದ್ರೂ ಏನು ಆಗಲಿಲ್ಲ, ಎಷ್ಟೊತ್ ನಿದ್ದೆ ಮಾಡಿದ್ನೋ ಏನೋ ಗೊತ್ತಿಲ್ಲ ಕತ್ತಲು ಹಂಗೇ ಇತ್ತು, ಅಮ್ಮನ ಮೇಲೆ ಅಪ್ಪನ ಮೇಲೆ ಕೋಪ ಬಂತು. ಅಜ್ಜೀನು ಬರ್ಲಿಲ್ಲ. ಎಲ್ಲರೂ ನನ್ನ ಬಿಟ್ಟುಬಿಟ್ಟವ್ರೆ ಅಂತ ಅನ್ನಿಸ್ತು…….
ಅಮ್ಮ ಇಷ್ಟೊತ್ತಾದ್ರೂ ಮಮ್ಮು ತಗೊಂಡು ಬರಲೇ ಇಲ್ಲ ಅಂತ ಕೋಪ ಬರ್ತಾ ಇತ್ತು. ಅಪ್ಪ ನಾನು ಎಲ್ಲಿದ್ದರೂ ಸಾತ್ವಿಕ್ ಅಂತ ಕೂಗಿಕೊಂಡು ಬರಲೇ ಇಲ್ಲ. ಯಾಕೋ ನನಗೂ ಗೊತ್ತಾಗ್ತಿಲ್ಲ. ನಾನೇನಾದ್ರೂ ಜಾಸ್ತಿ ತೀಟೆ ಗಲಾಟೆ ಹಠ ಮಾಡಿ ಅವರು ಕೋಪ ಮಾಡ್ಕೊಂಡವ್ರೋ ಏನೋ ಅಂದ್ಕೊಂಡೆ…..
ಏನೋ ಎಷ್ಟೊತ್ತೋ ಹಾಗೆ ಇದ್ದೆ. ಆವಾಗ ಇದ್ದಕ್ಕಿದ್ದಂಗೆ ಅದು ಯಾರೋ ಅಂಕಲ್ ನನ್ನನ್ನ ಎಳ್ಕೊಂಡು ಕೈಯಲ್ಲಿ ಇಟ್ಕೊಂಡು ಅದೇನೋ ಹಗ್ಗದ ಮೇಲೆ ಹಾಕಿ ಕಟ್ಟಿ ಹೇಳುದ್ರು. ನೋಡುದ್ರೆ ಕತ್ತಲೆಲ್ಲ ಮಾಯ, ಬೆಳಕು ಬಂದ್ಬಿಡ್ತು, ಜನ ಎಲ್ಲಾ ಸುತ್ತ ಇದ್ರೂ ನನಗೆ ಭಯ ಆಗೋಯ್ತು, ಅಳೋಕ್ಕೆ ಶುರು ಮಾಡ್ಬಿಟ್ಟೆ. ಏನಪ್ಪಾ ಏನಾಯ್ತು ನನಗೆ ಇಷ್ಟು ಜನ ಯಾಕ್ ಸೇರಿದ್ದಾರೆ ಅಂತ ಗೊತ್ತಾಗಿಲ್ಲ, ಆಮೇಲೆ ಅಮ್ಮನ್ನ ನೋಡ್ದೇ. ಅಮ್ಮ ಅಲ್ಲೇ ಇದ್ರು. ಬಾಚಿ ತಬ್ಬಿಕೊಂಡ್ರು. ನನಗೆ ಖುಷಿಯಾಗೋಯ್ತು. ಅಪ್ಪ ಓಡಿ ಬಂದು ಎತ್ಕೊಂಡ್ ಬಿಡ್ತು. ಅಪ್ಪ ಅಮ್ಮ ಎಲ್ಲರೂ ಸೇರಿ ಗಾಡಿಯಲ್ಲಿ ಎತ್ಕೊಂಡು ಕರ್ಕೊಂಡು ಹೋದರು….
ಆಸ್ಪತ್ರೆಯಲ್ಲಿ ಎಷ್ಟೊಂದು ಡಾಕ್ಟರ್ ಬಂದು ಏನೇನೋ ಚೆಕ್ ಮಾಡುದ್ರು. ನಂಗೇನು ಆಗೇ ಇಲ್ಲ. ನಾನು ಸುಮ್ಮನೆ ಆಟ ಆಡ್ಕೊಂಡು ಇದ್ದೀನಿ. ಎಲ್ಲರೂ ಬಂದು ತಿಂಡಿ ಬೇಕಾ ಮಗನೇ, ಚಾಕಲೇಟ್ ಬೇಕಾ ಮಗು, ಆರಾಮ್ ಇದ್ಯಾ ಕಂದ, ಅಂತ ಜಾಸ್ತಿ ಪ್ರೀತಿ ಮಾಡ್ತಾ ಇದ್ದಾರೆ. ನನಗೂ ಖುಷಿಯೋ ಖುಷಿ……
ಅದು ಎರಡು ವರ್ಷದ ಪುಟ್ಟ ಮಗುವಾಗಿದ್ದರಿಂದಾಗಿ ಅದಕ್ಕೆ ಸಾವಿನ ಭಯ ಕಾಡಲಿಲ್ಲ. ಭವಿಷ್ಯದ ಭಯ ನೆನಪಾಗಲಿಲ್ಲ. ಸಂಬಂಧಗಳು, ಆಸ್ತಿ ಅಂತಸ್ತುಗಳು, ಅಧಿಕಾರಗಳ ಮೋಹವಿರಲಿಲ್ಲ. ಒಂದು ವೇಳೆ ನಮ್ಮಂತ ದೊಡ್ಡವರಾಗಿದ್ದರೆ ಅವರ ಈ ಪರಿಸ್ಥಿತಿಗೆ ಬಿಪಿ ಶುಗರ್ ಎಲ್ಲವೂ ಒಮ್ಮೆಲೆ ಹೆಚ್ಚಾಗಿ ಏನೇನೋ ಇಲ್ಲಸಲ್ಲದ ಊಹೆಗಳು ಬಂದು ಅಲ್ಲಿಯೇ ಸಾಯುವ ಸಾಧ್ಯತೆಗಳಿದ್ದವು. ಆದರೆ ಮುಗ್ಧ ಮಗುವಿಗೆ ಆ ಯಾವ ಭಾವನೆಗಳು ಇರುವುದಿಲ್ಲ. ಆದ್ದರಿಂದಲೇ ಸುಮಾರು 20 ಗಂಟೆಗಳ ದೀರ್ಘಕಾಲ ತಲೆಕೆಳಗಾಗಿ ಇದ್ದರೂ ಮಗು ಆರೋಗ್ಯವಾಗಿ ಹೊರ ಬಂದಿದೆ ಮತ್ತು ಯಾವುದೇ ಶಾಕ್ ಇಲ್ಲದೆ ಸಹಜವಾಗಿಯೇ ವರ್ತಿಸುತ್ತಿದೆ. ನಾವಾಗಿದ್ದರೆ ಇದೊಂದು ಪುನರ್ಜನ್ಮ ಎಂದು ಅತಿಯಾದ ಭಾವನೆಗಳಿಗೆ ಒಳಗಾಗಿ ಸಿಲುಕುತ್ತಿದ್ದೆವಲ್ಲದೆ ಚೇತರಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಮಾಧ್ಯಮಗಳು ನಮ್ಮನ್ನು ಮತ್ತಷ್ಟು ಹಿಂಸಿಸುತ್ತಿದ್ದವು……
ಮತ್ತೆ ಮಗುವಾಗೋಣ…..