ಜಿ.ಎಸ್. ಶಿವರುದ್ರಪ್ಪ ಮೊಮ್ಮಗಳಿಂದ ಐತಿಹಾಸಿಕ ದಾಖಲೆ: ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ದಾಟಿದ ಮೊದಲ ಭಾರತೀಯ ಮಹಿಳೆ!

ಬೆಂಗಳೂರು: ಅಟ್ಲಾಂಟಿಕ್ ಸಾಗರವನ್ನು ಒಬ್ಬರೇ ದಾಟಿದ ಮೊದಲ ಕಲರ್ ವುಮನ್ ಎಂಬ ಹೆಗ್ಗಳಿಕೆಗೆ ಬೆಂಗಳೂರು ಮೂಲದ ಅನನ್ಯಾ ಪ್ರಸಾದ್ ಪಾತ್ರರಾಗಿದ್ದಾರೆ. 34 ವರ್ಷದ ಅನನ್ಯಾ, ಸ್ಪೇನ್‌ನ ಕ್ಯಾನರಿ ದ್ವೀಪಗಳಲ್ಲಿನ ಲಾ ಗೊಮೆರಾದಿಂದ ಈ ಸಾಹಸಕ್ಕೆ ಕೈಹಾಕಿ, ನಿಖರವಾಗಿ 52 ದಿನಗಳ ಪ್ರಯಾಣದ ಬಳಿಕ ಕ್ಯಾರಿಬಿಯನ್‌ನ ಅಂಟಿಗ್ವಾಗೆ ಯಶಸ್ವಿಯಾಗಿ ತಲುಪಿದ್ದಾರೆ. ಅವರು ಡಿಸೆಂಬರ್ 11, 2024ರಂದು ಪ್ರಯಾಣ ಆರಂಭಿಸಿ, ಫೆಬ್ರವರಿ 1, 2025 ರಂದು ತಲುಪಿದರು.
ಏಕೆ ವಿಶೇಷ?
ಅನನ್ಯಾ ಈ ಪ್ರತಿಷ್ಠಿತ ಟಾಲಿಸ್ಕರ್ ಅಟ್ಲಾಂಟಿಕ್ ಚಾಲೆಂಜ್ ರೇಸ್‌ನಲ್ಲಿ ಏಕಾಂಗಿ ವರ್ಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ಅವರು, “ನಾನು ರೋಯಿಂಗ್ ಅನ್ನು ಕೇವಲ ವ್ಯಾಯಾಮದ ಭಾಗವಾಗಿ ಅನುಭವಿಸುತ್ತೇನೆ. ಆದರೆ ಇದು ನನಗೆ ಪೂರ್ತಿಯಾಗಿ ಸಾಹಸ ಪ್ರಿಯವಾದ ಪ್ರಯತ್ನ!” ಎಂದು ಹೇಳಿದ್ದಾರೆ.
ಕನ್ನಡದ ಪ್ರಖ್ಯಾತ ಕವಿ ಕುಟುಂಬದಿಂದ ಬಂದ ಸಾಧಕಿ:
ಅನನ್ಯಾ ಪ್ರಸಾದ್ ಅವರು ಕೇವಲ ಸಾಹಸಿಯಾಗಿ ಮಾತ್ರವಲ್ಲ, ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೂ ತನ್ನ ಗುರುತಿರುವ ವ್ಯಕ್ತಿ. ಅವರು ಪ್ರಖ್ಯಾತ ಕನ್ನಡ ಕವಿ ಜಿ. ಎಸ್. ಶಿವರುದ್ರಪ್ಪ ಅವರ ಮೊಮ್ಮಗಳು. ಕೇವಲ 6ನೇ ವಯಸ್ಸಿನಲ್ಲಿ ಯುಕೆಗೆ ಸ್ಥಳಾಂತರವಾದರೂ, ತಮ್ಮ ಕನ್ನಡ ಸಂಸ್ಕೃತಿಯನ್ನು ಮರೆಯದೇ, ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾಳೆ.
ಶ್ರಮ, ಸಿದ್ಧತೆ, ಮತ್ತು ಸಾಧನೆ!
ಈ ಮಹತ್ತರ ಸಾಧನೆ ಹಿಂದೆ ಹಗಲಿರುಳು ಕಠಿಣ ತರಬೇತಿ ಮತ್ತು ಅವಿರತ ಪರಿಶ್ರಮ ಇದೆ. ಅಲೆಗಳ ನಡುವೆ, ಬಿಸಿಲಿನ ಕೆನ್ನಾಲಿಗೆ, ಉಗ್ರ ಗಾಳಿ – ಎಲ್ಲವನ್ನೂ ಎದುರಿಸಿ, ವಿಶ್ವದ ಶಕ್ತಿಶಾಲಿ ಸಾಗರಗಳಲ್ಲಿ ಒಂದಾದ ಅಟ್ಲಾಂಟಿಕ್ ಅನ್ನು ಒಬ್ಬರೇ ದಾಟಿದ್ದಾರೆ.
ಈ ಸಾಧನೆಯೊಂದಿಗೆ ಅನನ್ಯಾ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.