“ಗಜರಾಮ”: ಡಿಂಗ್ರಿ ನಾಗರಾಜ್ ಪುತ್ರನ ಚಿತ್ರದ ಹೊಸ ಗೀತೆ ಗ್ರಾಂಡ್ ರಿಲೀಸ್..!

ಬೆಂಗಳೂರು: ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿನಯದ “ಗಜರಾಮ” ಸಿನಿಮಾದ ಬಹುನಿರೀಕ್ಷಿತ ಸ್ಪೆಷಲ್ ಹಾಡು “ಸಾರಾಯಿ ಶಾಂತಮ್ಮ” ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು, ಈ ಹಾಡು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹೊಸ ಚಲನಚಿತ್ರ “ಗಜರಾಮ”ನ ಪ್ರಚಾರದ ಭಾಗವಾಗಿ, ಈ ಸಾಂಗ್ ಅನ್ನು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅನಾವರಣ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಜವರ್ಧನ್ ಹಾಗೂ ನಟಿ ರಾಗಿಣಿ ದ್ವಿವೇದಿ ಭಾಗವಹಿಸಿದ್ದರು.
ಈ ಹಾಡಿನಲ್ಲಿ ಮ್ಯಾಸೀವ್ ಸ್ಟಾರ್ ರಾಜವರ್ಧನ್ ಮತ್ತು ಮಾಸ್ ಕ್ವೀನ್ ರಾಗಿಣಿ ತಕತೈ ಅಂತಾ ಮಾಸ್ ಸ್ಟೆಪ್ಸ್ ಹಾಕಿದ್ದು, ಸಿನಿ ಪ್ರೇಮಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ. ಚಿನ್ಮಯ್ ಭಾವಿಕರೆ ಬರೆದಿರುವ ಕವನದ ಸಂಗೀತಕ್ಕೆ ಮಂಗ್ಲಿ ಮತ್ತು ಕುನಲ್ ಗಾಂಜಾವಾಲಾ ದ್ವನಿಯಾಗಿದ್ದು, ಮನೋಮೂರ್ತಿ ಅವರ ರಾಕ್ ಮ್ಯೂಸಿಕ್ ಕೇಳುಗರನ್ನು ಸೆಳೆಯುತ್ತದೆ.
ನಟ ರಾಜವರ್ಧನ್ ಹಾಡಿನ ಬಿಡುಗಡೆ ವೇಳೆ ಮಾತನಾಡಿ, “ಈ ಹಾಡು ಸಿನಿಮಾ ಪ್ರಚಾರಕ್ಕೆ ಹೆಚ್ಚುವರಿ ಶಕ್ತಿ ನೀಡುತ್ತದೆ. ಗಜರಾಮದಲ್ಲಿ ತುಂಬಾ ಕಷ್ಟಪಟ್ಟು ಕಾರ್ಯನಿರ್ವಹಿಸಿದ್ದೇವೆ. ಇಡೀ ತಂಡ ಕಠಿಣ ಶ್ರಮವಿಲ್ಲದೇ ಈ ಮಟ್ಟದ ಸಿನಿಮಾವನ್ನು ತಲುಪಲು ಸಾಧ್ಯವಿಲ್ಲ,” ಎಂದರು.
ನಟಿ ರಾಗಿಣಿ ಮಾತನಾಡಿ, “ನಮಗೆ ಹಬ್ಬದ ಸಂಭ್ರಮವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಈ ಹಾಡು ಸೂಕ್ತ. ಎಲ್ಲರ ಒಟ್ಟಿಗೆ ಕೆಲಸ ಮಾಡುವ ಅವಕಾಶ ದೊಡ್ಡ ಸಂತೋಷ ತಂದಿದೆ,” ಎಂದರು.
“ಗಜರಾಮ” ಚಿತ್ರ ಡಿಸೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ನಿರ್ದೇಶನವನ್ನು ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ ಮಾಡಿದ್ದಾರೆ. ಇತರ ಪ್ರಮುಖ ಪಾತ್ರಗಳಲ್ಲಿ ತಪಸ್ವಿನಿ, ದೀಪಕ, ಮತ್ತು ಖಳನಾಯಕನಾಗಿ ಕಬೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.