“#ಪಾರು ಪಾರ್ವತಿ” ಚಿತ್ರ ಬಿಡುಗಡೆಗೆ ಸಜ್ಜು: ಹೊಸ ಅನುಭವ ಹಂಚಿಕೊಂಡ ದೀಪಿಕಾ ದಾಸ್..?!
ಬೆಂಗಳೂರು: ಎಟೀನ್ ಥರ್ಟಿ ಸಿಕ್ಸ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾದ “#ಪಾರು ಪಾರ್ವತಿ” ಚಿತ್ರಕ್ಕೆ ಪಿ.ಬಿ. ಪ್ರೇಮನಾಥ್ ಅವರು ನಿರ್ಮಾಪಕರಾಗಿದ್ದು, ಚಿತ್ರವನ್ನು ರೋಹಿತ್ ಕೀರ್ತಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಿಕಾ ದಾಸ್ ‘ಪಾಯಲ್’ ಎಂಬ ಪಾತ್ರದಲ್ಲಿ ಮಿಂಚಿದ್ದು, ಈ ಪಾತ್ರಕ್ಕಾಗಿ 10 ಕೆಜಿ ತೂಕ ಇಳಿಸಿಕೊಂಡು, ಉದ್ದ ಕೂದಲನ್ನು ಗಿಡ್ಡ ಕೂದಲನ್ನಾಗಿ ಬದಲಿಸಿಕೊಂಡಿದ್ದಾರೆ.
ನಿರ್ಮಾಪಕ ಪ್ರೇಮನಾಥ್ ಮಾತನಾಡಿ, “ನಾನು ಮೂಲತಃ ಐಟಿ ಉದ್ಯೋಗಿ. ಚಿಕ್ಕವಯಸ್ಸಿನಿಂದಲೂ ಸಿನಿಮಾ ನೋಡುತ್ತಿದ್ದ ನನಗೆ, ಸಿನಿಮಾ ನಿರ್ಮಾಣ ಮಾಡುವ ಕನಸ್ಸಿತ್ತು. ನಿರ್ದೇಶಕರು ಒಳ್ಳೆಯ ಕಥೆ ನೀಡಿದ್ದಾರೆ. ನಮ್ಮ ನಿರ್ಮಾಣ ಸಂಸ್ಥೆ ಎಟೀನ್ ಥರ್ಟಿ ಸಿಕ್ಸ್ ಪಿಕ್ಚರ್ಸ್ ಉದ್ಘಾಟನೆಯಾಗಿದೆ. 1836 ಕೂಡಿದಾಗ 9 ಬರುತ್ತದೆ, ಅದು ನನ್ನ ಲಕ್ಕಿ ನಂಬರ್” ಎಂದರು.
ಚಿತ್ರದ ನಿರ್ದೇಶಕ ರೋಹಿತ್ ಕೀರ್ತಿ, “ಈ ಚಿತ್ರವು ಅಡ್ವೆಂಚರ್ಸ್ ಮತ್ತು ಪ್ರವಾಸ ಕಥನ, ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರ ಕಾಂಡ್ ನಲ್ಲಿ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಮೂವರು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ದೀಪಿಕಾ ದಾಸ್ ಅವರ ಪಾತ್ರ ನಿಮಗೆ ಹೊಸ ಅನುಭವ ನೀಡಲಿದೆ,” ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೀಪಿಕಾ ದಾಸ್ ಹೇಳುವ ಪ್ರಕಾರ, “ನನಗೆ ಅಡ್ವೆಂಚರ್ಸ್ ಮತ್ತು ಜರ್ನಿಯಲ್ಲಿ ಆಸಕ್ತಿ. ಈ ಚಿತ್ರದಲ್ಲಿ ನಾನು ಏಕಾಂಗಿ ಸಂಚಾರಿ ಪಾತ್ರದಲ್ಲಿ ಇದ್ದೇನೆ. ಚಿತ್ರದ ಬಹುಪಾಲು ಭಾಗವು ಪ್ರಯಾಣದ ನಡುವೆಯೇ ನಡೆಯುತ್ತದೆ. ನಾವು ಪ್ರಯಾಣಿಸಿರುವ ಕಾರು ಕೂಡ ನಮ್ಮಷ್ಟೇ ಮುಖ್ಯ ಪಾತ್ರವಾಗಿದೆ,” ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದರು.
ಚಿತ್ರದ ಉಳಿದ ಕಲಾವಿದರು ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಕೂಡ ತಮ್ಮ ಅಭಿನಯದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬಿರುಸಿನಿಂದ ಸಾಗುತ್ತಿದ್ದು, ಚಿತ್ರವು ಶೀಘ್ರದಲ್ಲೇ ಪ್ರೇಕ್ಷಕರಿಗೆ ಮನರಂಜನೆ ನೀಡಲು ಚಿತ್ರಮಂದಿರಕ್ಕೆ ಬರಲಿದೆ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ದೀಪಿಕಾ ದಾಸ್ ಅವರ ಹೊಸ ಮುಖವನ್ನು ಪರಿಚಯಿಸಲಿದೆ.