ಬೆಂಗಳೂರು: ಈ ವರ್ಷದ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮದ ಸಮಾರೋಪವು ಅದ್ಧೂರಿಯಾಗಿ ನಡೆಯಲು ಸಿದ್ದವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನಡದ ಅಭಿಮಾನಿಗಳನ್ನು ಕುತೂಹಲಕ್ಕೆ ಗುರಿ ಮಾಡುವಂತಹ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಈ ಬಾರಿಯ ಸಮಾರೋಪವು ಕನ್ನಡದ ಕೀರ್ತಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಿದೆ.
ಸುವರ್ಣ ಸಂಭ್ರಮದ ಹೈಲೈಟ್ಸ್:
- 50 ಸಾಧಕ ಮಹಿಳೆಯರ ಕುರಿತು 100 ಪುಟಗಳ ವಿಶೇಷ ಪುಸ್ತಕ: ಸಾಹಿತ್ಯ ಅಕಾಡೆಮಿಯು 50 ಮಹಿಳಾ ಸಾಧಕರ ಕುರಿತಾದ ಪುಸ್ತಕವನ್ನು ಪ್ರಕಟಿಸಲಿದೆ.
- ವಿಧಾನಸೌಧದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಅನಾವರಣ: 25 ಅಡಿ ಎತ್ತರದ ಕಂಚಿನ ಭುವನೇಶ್ವರಿ ದೇವಿಯ ಪ್ರತಿಮೆ ನವೆಂಬರ್ 1 ರಂದು ಅನಾವರಣಗೊಳ್ಳಲಿದೆ.
- 4 ವಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು: ಮೈಸೂರಿನಲ್ಲಿ ಚಿಂತನಾ ಸಮಾವೇಶ, ರಾಯಚೂರಿನಲ್ಲಿ ಗೋಕಾಕ್ ಚಳವಳಿ ಸ್ಮರಣೆ, ಗಡಿನಾಡಿನಲ್ಲಿ ಸಾಂಸ್ಕೃತಿಕ ಉತ್ಸವ ಮತ್ತು ಮಂಗಳೂರು ನಗರದಲ್ಲಿ ಬಹುಸಂಸ್ಕೃತಿ ಉತ್ಸವ ಆಯೋಜಿಸಲಾಗುತ್ತಿದೆ.
- ಕನ್ನಡ ಬಾವುಟ ಹಾರಿಸುವ ಅಭಿಯಾನ: ಮನೆ ಮನೆಗಳಲ್ಲಿ ಕನ್ನಡದ ಬಾವುಟ ಹಾರಿಸಲು ಕರೆ ನೀಡಲಾಗಿದೆ.
- ಸಾಹಿತಿಗಳ ನುಡಿಮುತ್ತುಗಳ ಪ್ರಚಾರ: ಕನ್ನಡದ ಸಾಹಿತಿಗಳ ಅಮೂಲ್ಯ ನುಡಿಮುತ್ತುಗಳನ್ನು ರಾಜ್ಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಮತ್ತು ಸಾರಿಗೆ ಬಸ್‌ಗಳಲ್ಲಿ ಪ್ರಚುರಪಡಿಸಲಾಗುವುದು.
- ಕನ್ನಡ ರಾಜ್ಯೋತ್ಸವ ಸಂಭ್ರಮ: ಶಾಲಾ ಮತ್ತು ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ ಸರ್ಕಾರ.