ಗ್ರ್ಯಾಮಿ ಪ್ರಶಸ್ತಿ 2024: ಶಂಕರ್ ಮಹಾದೇವನ್, ಝಾಕೀರ್ ಹುಸೇನರ ‘ಶಕ್ತಿ’ ಸಂಗೀತ ತಂಡಕ್ಕೆ ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ ಪ್ರಶಸ್ತಿ.
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ, 2024ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ, ಶಂಕರ್ ಮಹಾದೇವನ್ ಹಾಗೂ ಝಾಕೀರ್ ಹುಸೇನ್ ಅವರ ‘ಶಕ್ತಿ’ ಪ್ಯೂಶಸ್ ಬ್ಯಾಂಡ್ ತಂಡ ತನ್ನ ‘ದಿಸ್ ಮೊಮೆಂಟ್’ ಎಂಬ ಆಲ್ಬಂಗೆ ‘ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ‘ ಪ್ರಶಸ್ತಿಯನ್ನು ತನ್ನ ಜೋಳಿಗೆಗೆ ಹಾಕಿಕೊಂಡಿದೆ.
“ದೇವರು, ಕುಟುಂಬ, ಸ್ನೇಹಿತರು ಮತ್ತು ಭಾರತಕ್ಕೆ ಧನ್ಯವಾದಗಳು. ನಾವು ಭಾರತದ ಬಗ್ಗೆ ಹೆಮ್ಮೆ ಪಡುತ್ತೇವೆ…ಕೊನೆಯದಾಗಿ, ನನ್ನ ಸಂಗೀತದ ಪ್ರತಿಯೊಂದು ಟಿಪ್ಪಣಿಯನ್ನು ನನ್ನ ಪತ್ನಿಗೆ ಅರ್ಪಿಸಲು ಬಯಸುತ್ತೇನೆ”. ಎಂದು ಗಾಯಕ ಶಂಕರ್ ಮಹಾದೇವನ್ ಅವರು ಗ್ರ್ಯಾಮಿ ವೇದಿಕೆಯಲ್ಲಿ ಹೇಳಿದರು.
‘ದಿಸ್ ಮೊಮೆಂಟ್’ ಆಲ್ಬಂ ಕಳೆದ ವರ್ಷ ಜೂನ್ 30ರಂದು ಬಿಡುಗಡೆಗೊಂಡಿತ್ತು. ಇದರಲ್ಲಿ 8 ಹಾಡುಗಳಿದ್ದು, ವಿಶೇಷ ಎಂದರೆ ಸಂಗೀತ ದಿಗ್ಗಜರಾದ ಜಾನ್ ಮೆಕ್ಲಾಲಿನ್, ಝಾಕೀರ್ ಹುಸೇನ್, ಶಂಕರ್ ಮಹಾದೇವನ್, ವಿ. ಸೆಲ್ವ ಗಣೇಶ್, ಮತ್ತು ಗಣೇಶ ರಾಜಗೋಪಾಲನ್ ರವರು ಈ ಆಲ್ಬಂನ ಭಾಗವಾಗಿದ್ದಾರೆ.
ಮತ್ತೊಂದು ಸಂತಸದ ಸುದ್ದಿ ಎಂದರೆ, ತಬಲಾ ಮಾಂತ್ರಿಕ ಶ್ರೀ ಝಾಕೀರ್ ಹುಸೇನ್ ಅವರು ಈ ಬಾರಿ ಎರಡು ಗ್ರ್ಯಾಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.