ಚದುರಂಗದ ಚಾಂಪಿಯನ್ ಗುಕೇಶ್.ಡಿ…!

ಚೆಸ್ ಸದ್ಯ ಭಾರತ ದೇಶದಲ್ಲಿ ಮನೆ ಮಾತಾಗಿರುವ ಸುದ್ದಿ. ಇನ್ನೂ ಡ್ರೈವಿಂಗ್ ಲೈಸನ್ಸ್‌ಕೂಡ ಸಿಗದ ಹುಡುಗ ಸಿಂಗಾಪುರ್‌ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾನೆ. 18 ನೇ ವಯಸ್ಸಿನಲ್ಲೇ ಗುಕೇಶ್ ಭಾರತದ ಹೆಸರನ್ನು ಪ್ರಪಂಚದಾದ್ಯಂತ ರಾರಾಜಿಸುವಂತೆ ಮಾಡಿದ್ದಾರೆ. ಗುಕೇಶ್ ದೊಮ್ಮರಾಜು 29 ಮೇ 2006 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು.
ಚೆಸ್ ಪ್ರಾಡಿಜಿಯಲ್ಲಿ ಇವರು ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಗೆ ಅರ್ಹತೆ ಪಡೆದ ಮೂರನೇ ಕಿರಿಯ ವ್ಯಕ್ತಿಯಾಗಿದ್ದಾರೆ. 2700 ರ ಚೆಸ್ ರೇಟಿಂಗ್ ಅನ್ನು ತಲುಪಿದ ಮೂರನೇ ಕಿರಿಯ ವ್ಯಕ್ತಿಯಾಗಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಚೆಸ್ ಆಟವು, ಕ್ರಿಕೆಟ್ ಅಥವಾ ಫುಟ್‌ಬಾಲ್‌ನಂತೆ ಟೀಮ್‌ನಲ್ಲಿ ಆಡುವ ಪಂದ್ಯವಲ್ಲ, ಇದು ವಯಕ್ತಿಕ ಆಟವಾಗಿದೆ. ಹೀಗಾಗಿ ಚೆಸ್ ಚಾಂಪಿಯನ್‌ನ ನಿರ್ಧಾರ ಮಾಡಲು ವರ್ಲ್ಡ್‌ಕಪ್ ಇರುವುದಿಲ್ಲ. ಬದಲಾಗಿ ಚಾಂಪಿಯನ್‌ಶಿಪ್ ಪಂದ್ಯ ಇರುತ್ತದೆ. ಪ್ರಸ್ತುತ ಚಾಂಪಿಯನ್, ಹಾಲಿ ಚಾಂಪಿಯನ್ ವಿರುದ್ಧ ವರ್ಷದ ಬೆಸ್ಟ್ ಚೆಸ್ ಆಟಗಾರ ಈ ಪಂದ್ಯದಲ್ಲಿ ಆಡುತ್ತಾರೆ. ಇಂತಹ ಆಟಗಾರರನ್ನು ಚಾಲೆಂಜರ್ ಎಂದು ಕರೆಯುತ್ತಾರೆ.
ಇದೇ ರೀತಿ ನಮ್ಮ ಭಾರತದ ಗುಕೇಶ್ ಚಾಲೆಂಜರ್ ಆಗಿ ಕಣಕ್ಕಿಳಿದಿದ್ದರು. ಅವರಿಗೆ 2023ರ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಎದುರಾಳಿಯಾಗಿದ್ದರು. 14 ಸುತ್ತಿನ ಈ ಮ್ಯಾಚ್‌ನಲ್ಲಿ ಮೊದಲ 13 ಸುತ್ತುಗಳಲ್ಲಿ ಡಿಂಗ್ ಲಿರೆನ್ ಮತ್ತು ಗುಕೇಶ್ ತಲಾ ಎರಡು ಆಟ ಗೆದ್ದಿದ್ದರು, 9 ಆಟಗಳು ಡ್ರಾ ಆಗಿದ್ದವು. ಇಬ್ಬರ ಆಟ ಸಮಬಲವಾಗಿತ್ತು. ಹೀಗಾಗಿ ಕೊನೆಯ ಆಟವನ್ನು ಗೆಲ್ಲಲೇಬೇಕಾಗಿತ್ತು. ಗುಕೇಶ್‌ಗೆ ಚಿಕ್ಕ ವಯಸ್ಸಿನಲ್ಲೇ ವಿಶ್ವ ಕಿರೀಟ ಧರಿಸುವ ಅವಕಾಶ, ಡಿಂಗ್‌ಲಿರಿನ್‌ಗೆ ಚಾಂಪಿಯನ್ ಪಟ್ಟವನ್ನು ಚಿಕ್ಕ ಹುಡುಗನ ಮುಂದೆ ಕಳೆದುಕೊಳ್ಳುವ ಆತಂಕ. ಆದರೆ ಭಾರೀ ಜಿದ್ದಾಜಿದ್ದಿಯಲ್ಲಿ ನಡೆದ ಪಂದ್ಯದಲ್ಲಿ ಕೊನೆಗೂ ಗುಕೇಶ್ ಗೆಲುವು ಸಾಧಿಸಿದರು.

ಬರೋಬ್ಬರಿ 2:45 ನಿಮಿಷ ಸುಧೀರ್ಘ ಆಟದ ನಂತರ 58 ನೇ ನಡೆಯಲ್ಲಿ ಗುಕೇಶ್ ಮೇಲುಗೈ ಸಾಧಿಸಿದರು. ಲಿರೆನ್‌ರನ್ನು 7.5 ಮತ್ತು 6.5 ಅಂತರದಲ್ಲಿ ಸೋಲಿಸಿ 18 ನೇ ವರ್ಲ್ಡ್‌ಚಾಂಪಿಯನ್ ಆದರು. ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹೆಗ್ಗಳಿಕೆಯನ್ನು ಗುಕೇಶ್ ಪಡೆದಿದ್ದಾರೆ. ಇದಲ್ಲದೇ ವಿಶ್ವನಾಥನ್ ಆನಂದ್ ಬಳಿಕ ಚಂದುರಂಗದ ಎರಡನೇ ಸಾಮ್ರಾಟನಾದ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೂಗಲ್ ಸಿಇಓ ಸುಂದರ್‌ಪಿಚಾಯಿ, ಗ್ಯಾರಿ ಕ್ಯಾಸ್ಪ್ರೋ ಮತ್ತು ಅಮೆರಿಕಾದ ಹಿಕಾರು ನಕಾಮೂರ ಸೇರಿದಂತೆ ವಿಶ್ವದ ದಿಗ್ಗಜ ಚೆಸ್ ಆಟಗಾರರೆಲ್ಲಾ ಗುಕೇಶ್ ಸಾಧನೆಯನ್ನು ಕೊಂಡಾಡಿದ್ದಾರೆ.
ಚಾಲೆಂಜರ್ ನಿರ್ಣಯ ಮಾಡುವ ಟೂರ್ನಮೆಂಟ್‌ನಲ್ಲಿ ಗುಕೇಶ್, ಅಮೆರಿಕಾದ ಹಿಕಾರು ನಕಮುರ, ರಷ್ಯಾದ ಇಯಾನ್ ನಪುಂಶಿಯಂತಹ 8 ಘಟಾನುಘಟಿ ಆಟಗಾರರನ್ನು ಸೋಲಿಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲೂ 13 ಸುತ್ತಿನವರೆಗೆ ಸಮಬಲದ ಹೋರಾಟ ನೀಡಿದ್ದಾರೆ. 18 ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಎನ್ನುವ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ