ಹಾಸನದಲ್ಲಿ ಗುಂಡಿನ ಸದ್ದು. ಎರಡು ಸಾವು
ಹಾಸನ: ಜಿಲ್ಲೆಯ ಕೆ.ಆರ್. ಪುರಂ ಭಾಗದ ಹೊಯ್ಸಳನಗರದಲ್ಲಿ ಇಂದು ಗುಂಡಿನ ದಾಳಿ ನಡೆದಿದೆ. ದಾಳಿಗೆ ಎರಡು ಜನರು ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯಿಂದ ವ್ಯವಹಾರಕ್ಕೆ ಸಂಬಂಧಿಸಿದ ವೈರತ್ವದಿಂದ ಈ ಘಟನೆ ಸಂಭವಿಸಿದೆ ಎಂದು ಹಾಸನ ವರಿಷ್ಠಾಧಿಕಾರಿ ಮುಹಮ್ಮದ್ ಸುಜಿತಾ ತಿಳಿಸಿದ್ದಾರೆ.
“ಮಧ್ಯಾಹ್ನದ ವೇಳೆಗೆ ಕಾರಿನಲ್ಲಿ ನಿವೇಶನ ನೋಡಲು ಇಬ್ಬರು ಬಂದಿದ್ದರು. ಇಬ್ಬರೂ ಮಾತನಾಡಿಕೊಂಡು ಕಾರಿನತ್ತ ಬಂದಿದ್ದಾರೆ. ನಂತರ ಗುಂಡಿನ ಶಬ್ದ ಕೇಳಿ ಬಂದಿದೆ. ಅಕ್ಕ ಪಕ್ಕದವರು ಹೊರಗೆ ಬಂದು ನೋಡಿದಾಗ, ಒಂದು ಶವ ಹೊರಗಡೆ ಬಿದ್ದಿತ್ತು, ಇನ್ನೊಂದು ಶವ ಕಾರಿನಲ್ಲಿತ್ತು.” ಎಂದು ಎಸ್‌ಪಿ ಮಾದ್ಯಮಗಳಿಗೆ ತಿಳಿಸಿದ್ದಾರೆ.
“ನಿವೇಶನ ವಿಚಾರದಲ್ಲಿ ಜಗಳ ಆಗಿರಬಹುದು. ಶರಾಫತ್ ಅಲಿಗೆ ಹೊಡೆದು ಕೊಲೆ ಮಾಡಿದ ಆಸೀಫ್, ಕಾರಿನಲ್ಲಿ ಕುಳಿತು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ, ಈ ಬಗ್ಗೆ ತನಿಖೆ ಮಾಡುತ್ತಿದ್ದು, ನಂತರವಷ್ಟೇ ಸ್ಪಷ್ಟ ಮಾಹಿತಿ ದೊರೆಯಲಿದೆ. ಕಾರಿನಲ್ಲಿ ಪಿಸ್ತೂಲ್ ಸಿಕ್ಕಿದೆ. ಕಾರು ಮೈಸೂರು ನೋಂದಣಿ ಹೊಂದಿದ್ದು, ಅದನ್ನು ಮಾರಾಟ ಮಾಡಲಾಗಿದೆಯೇ? ಇಬ್ಬರು ಎಲ್ಲಿಯವರು ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ.” ಎಂದು ಪೊಲೀಸರು ತಿಳಿಸಿದ್ದಾರೆ.