ಹೆಚ್.ಡಿ. ಕುಮಾರಸ್ವಾಮಿ ಭೂಮಿ ಡಿನೋಟಿಫಿಕೇಷನ್ ಪ್ರಕರಣ: ಎಡಿಜಿಪಿ ವಿರುದ್ಧ ಹೆಚ್‌ಡಿಕೆ ‘ಗರಂ’ ಯಾಕೆ..?!
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಎಂ. ಚಂದ್ರಶೇಖರ್ ವಿರುದ್ಧ ಭಾರಿ ಆರೋಪಗಳನ್ನು ಹೊರಿಸಿದ್ದಾರೆ. 2007ರ ಭೂಮಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಕಚೇರಿಯ ದುರ್ಬಳಕೆ, ಕಮಿಷನ್ ಡಿಮ್ಯಾಂಡ್ ಮತ್ತು ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದು, ಇದರಿಂದ ರಾಜ್ಯದ ರಾಜಕೀಯದಲ್ಲಿ ತೀವ್ರತೆ ಹೆಚ್ಚಿಸಿದೆ.
ಕುಮಾರಸ್ವಾಮಿಯವರನ್ನು 2007ರ ಗಂಗೇನಹಳ್ಳಿಯ 1.11 ಎಕರೆ ಭೂಮಿಯ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು 6:30 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಂತರ, ಕುಮಾರಸ್ವಾಮಿ ಎಡಿಜಿಪಿ ಚಂದ್ರಶೇಖರ್ ವಿರುದ್ಧ ₹20 ಕೋಟಿ ಹಣದ ಬೇಡಿಕೆ ಸೇರಿದಂತೆ ವಿವಿಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
“ಚಂದ್ರಶೇಖರ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಪರವಾಗಿ ಅವರು ರಾಜಕೀಯ ಪಿತೂರಿ ನಡೆಸುತ್ತಿದ್ದಾರೆ,” ಎಂದು ಕುಮಾರಸ್ವಾಮಿ ಆರೋಪಿಸಿದರು. ಇದಲ್ಲದೆ, ಎಡಿಜಿಪಿ ಚಂದ್ರಶೇಖರ್ ಅವರು ರಾಜ್ಯಪಾಲರ ಕಚೇರಿ ಅಧಿಕಾರಿಗಳನ್ನು ವಿಚಾರಿಸಲು ಅವಕಾಶ ಕೇಳಿದ್ದಾರೆ ಎಂಬುದು ಕುಮಾರಸ್ವಾಮಿಯ ಆರೋಪ.