“ಹರಿದಾಸರ ದಿನಚರಿ” ಟ್ರೇಲರ್ ಬಿಡುಗಡೆ: ಬೆಳ್ಳಿತೆರೆಗೆ ಬರುತ್ತಿದೆ ಪುರಂದರ ದಾಸರ ಜೀವನ ಚರಿತ್ರೆ..!

ಬೆಂಗಳೂರು: 15ನೇ ಶತಮಾನದ ಭಕ್ತಿ ಚರಿತ್ರೆಯ ಅಸಮಾನ್ಯ ಪುರುಷ, ದಾಸಶ್ರೇಷ್ಠ ಶ್ರೀ ಪುರಂದರ ದಾಸರ ದೈನಂದಿನ ಜೀವನದ ಚಿತ್ರಣವನ್ನು ತೆರೆಗೆ ತರಲು ಕರಿಗಿರಿ ಫಿಲ್ಮ್ಸ್ ನಿರ್ಮಿಸಿದ “ಹರಿದಾಸರ ದಿನಚರಿ” ಚಿತ್ರದ ಟ್ರೇಲರ್ ಉಡುಪಿಯ ಶ್ರೀ ಕೃಷ್ಣ ಸನ್ನಿಧಿಯಲ್ಲಿ ಬಿಡುಗಡೆಯಾಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಚಿತ್ರ “ಜಗದೋದ್ಧಾರನ ಆಡಿಸಿದಳೆ ಯಶೋದೆ” ಗೀತೆಯನ್ನು ರಚಿಸಿದ ಕ್ಷಣವನ್ನು ಚಿತ್ರಿತಗೊಳಿಸಿದೆ. “ಹರಿದಾಸರ ದಿನಚರಿ” ಚಿತ್ರವು ಪುರಂದರ ದಾಸರ ಆಧ್ಯಾತ್ಮಿಕ ಜೀವನದ ದೃಶ್ಯಾವಳಿಗಳ ಮೂಲಕ ಪ್ರೇಕ್ಷಕರನ್ನು ಆಳವಾದ ಭಕ್ತಿಯಲ್ಲಿಗೆ ಕರೆದೊಯ್ಯುವುದರೊಂದಿಗೆ, ದಾಸರ ಆಳವಾದ ಆಧ್ಯಾತ್ಮಿಕ ಪ್ರಜ್ಞೆಯ ಆನಂದವನ್ನು ತಂದುಕೊಡುತ್ತದೆ ಎಂದು ನಿರ್ದೇಶಕ ಗಿರೀಶ್ ನಾಗರಾಜ್ ಅವರು ಹೇಳಿದ್ದಾರೆ.
ಶ್ರೀ ಪುರಂದರ ದಾಸರ ಪಾತ್ರದಲ್ಲಿ ದಾಸ ಸಾಹಿತ್ಯದ ಖ್ಯಾತ ಗಾಯಕ ಡಾ. ವಿದ್ಯಾಭೂಷಣ ಅವರು ತಮ್ಮ ದನಿಯ ಸೊಗಡಿನೊಂದಿಗೆ, ಪುರಂದರ ದಾಸರ ಕೃಪೆ, ಕರುಣೆ ಹಾಗೂ ಭಕ್ತಿಯ ಪ್ರತಿಬಿಂಬವನ್ನು ತೆರೆದಿಡುತ್ತಾರೆ. ಈ ಚಿತ್ರ ಪುರಂದರ ದಾಸರ ಗುಣಗಾನ, ಆಚರಣೆ, ತಪಸ್ವಿಗಳ ಭೇಟಿಯಂತಹ ಜೀವನದ ಅಂಶಗಳನ್ನು ಸೆರೆಹಿಡಿದಿದೆ.
ಚಿತ್ರದ ತಾಂತ್ರಿಕ ಗುಣಮಟ್ಟ ಮತ್ತು ಕಥಾವಸ್ತು: ಚಿತ್ರದ ಬಾಹ್ಯ ಮತ್ತು ಒಳಾಂಗಣ ದೃಶ್ಯಗಳನ್ನು ಅತ್ಯಂತ ಸೂಕ್ಷ್ಮತೆಯಿಂದ ನಿರ್ಮಿಸಿದ ಎಮ್. ಹರಿದಾಸ್ ಅವರ ಛಾಯಾಗ್ರಹಣ ಮತ್ತು ರೊಣದ ಬಕ್ಕೇಶ್ ಅವರ ಹೃದಯಸ್ಪರ್ಶಿ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು 15ನೇ ಶತಮಾನದ ಭಕ್ತಿಯ ನೆಲೆಗಳತ್ತ ಕರೆದೊಯ್ಯುತ್ತವೆ. ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕ ಗಿರೀಶ್ ನಾಗರಾಜ್ ಅವರೇ ನಿರ್ವಹಿಸಿದ್ದು, ಪ್ರೇಕ್ಷಕರಿಗೆ ಪುರಂದರ ದಾಸರ ಅವತಾರವನ್ನು ಅತ್ಯುತ್ತಮವಾಗಿ ಪರಿಚಯಿಸುತ್ತಾರೆ.
ಚಿತ್ರದ ತಾರಾಗಣ ಮತ್ತು ಸಂಗೀತ: ಡಾ. ವಿದ್ಯಾಭೂಷಣ ಅವರೊಂದಿಗೆ ಘನಶ್ಯಾಮ್ ಕೆ.ವಿ, ವಾಸುದೇವ ಮೂರ್ತಿ ಕೆ.ಎನ್, ಚಲಪತಿ, ಪ್ರಸನ್ನ ವೆಂಕಟೇಶ ಮುಂತಾದವರು ತಮ್ಮ ಪಾತ್ರಗಳಲ್ಲಿ ತೊಡಗಿದ್ದಾರೆ.