ಗೌಪ್ಯವಾಗಿ ‘ಟಾಟಾ ಏಸ್’ ಮೂಲಕ ಮೈಸೂರಿಗೆ ತೆರಳಿದರೇ ಆರ್.ಅಶೋಕ್?!
ಮೈಸೂರು: ಮೂಡ ಹಗರಣದ ವಿರುದ್ಧವಾಗಿ ಇಂದು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕ, ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆಯನ್ನು ನಡೆಸಿತ್ತು. ಆದರೆ ಈ ಪ್ರತಿಭಟನೆಗೆ ತೆರಳಿದ್ದ ರಾಜ್ಯ ಬಿಜೆಪಿ ಮುಖಂಡರನ್ನು ರಾಮನಗರದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಷಯವನ್ನು ಅರಿತ ಶಾಸಕ ಆರ್. ಅಶೋಕ್ ಹಾಗೂ ಡಾ. ಸಿ.ಎನ್. ಅಶ್ವತ್ ನಾರಾಯಣ್ ಅವರನ್ನು ಒಳಗೊಂಡ ಬಿಜೆಪಿ ತಂಡ, ಪೋಲಿಸರಿಗೆ ತಿಳಿಯದಂತೆ ಗೌಪ್ಯವಾಗಿ ಟಾಟಾ ಏಸ್ ಮೂಲಕ ಮೈಸೂರಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತು ಶಾಸಕರಾದ ಡಾ. ಸಿ.ಎನ್. ಅಶ್ವತ್ ನಾರಾಯಣ್ ತಮ್ಮ ಎಕ್ಸ್ ಖಾತೆಯ ಮೂಲಕ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. “ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಣೆ ಮಾಡಲು ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ.
ಪ್ರತಿಭಟನಾ ನಿರತ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ.
ಈ ವಿಷಯವನ್ನು ತಿಳಿದು, ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ
ಆರ್.ಅಶೋಕ್ ಜತೆಗೂಡಿ ಬೆಂಗಳೂರಿನಿಂದ ಟಾಟಾ ಏಸ್ ಮೂಲಕ ಮೈಸೂರಿಗೆ ತೆರಳಿ ಪ್ರತಿಭಟನೆ ನಡೆಸಲಾಯಿತು.” ಎಂದು ಹೇಳಿದ್ದಾರೆ.
ಬೆಳ್ಳಂಬೆಳಗ್ಗೆ ಬಿಜೆಪಿಯ ಬೃಹತ್ ಪ್ರತಿಭಟನೆಯ ಸುಳಿವು ಪೊಲೀಸರಿಗೆ ದೊರಕಿತ್ತು. ಹಾಗಾಗಿ, ಭಾರತೀಯ ಜನತಾ ಪಕ್ಷದ ಮುಖಂಡರ ಮನೆ ಮುಂದೆ ಪೊಲೀಸ್ ತೂಕಡಿಗಳು ನಿಂತಿದ್ದವು. ಇದನ್ನು ಅಘೋಷಿತ ತುರ್ತು ಪರಿಸ್ಥಿತಿ ಎಂದು ಬಿಜೆಪಿಯವರು ಕಾಂಗ್ರೆಸ್ ಸರ್ಕಾರವನ್ನು ಆಕ್ರೋಶ ವ್ಯಕ್ತಪಡಿಸಿದ್ದಾರೆ.