ಕರಾವಳಿಯಲ್ಲಿ ಮುಂದುವರೆದ ಮುಂಗಾರು; ತುಂಬಿ ಹರಿಯುತ್ತಿವೆ ನದಿಗಳು.

ಉತ್ತರ ಕನ್ನಡ: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರಿನ ಮಹಾ ಆರ್ಭಟ ವಾರ ಕಳೆದರೂ ಮುಗಿಯುತ್ತಿಲ್ಲ. ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಗೆ ಇಲ್ಲಿನ ಜಲಪಾತಗಳು ಭೋರ್ಗರೆದು ಹರಿಯುತ್ತಿದೆ. ಜಲಪಾತಗಳ ಜಿಲ್ಲೆ, ಉತ್ತರ ಕನ್ನಡದಲ್ಲಿ ಮಿತಿ ಇಲ್ಲದೆ ಸುರಿಯುತ್ತಿರುವ ಮಳೆಗೆ, ಕೆಲವು ಕಡೆ ಗುಡ್ಡ ಕುಸಿತ ಕೂಡ ಕಂಡಿದೆ. ಉಡುಪಿ ಜಿಲ್ಲೆ ಈ ಬಾರಿ ದಾಖಲೆಯ ಮಳೆಯನ್ನು ಪಡೆದಿದೆ.
ಹವಾಮಾನ ಇಲಾಖೆ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಮುಂದಿನ ಮಳೆ ಮುನ್ಸೂಚನೆಯನ್ನು ಈಗಾಗಲೇ ನೀಡಿದೆ. ಜುಲೈ 17 ರಿಂದ 20 ರವರೆಗೆ ಕರಾವಳಿ ಜಿಲ್ಲೆಗಳಿಗೆ ಮತ್ತು ಜುಲೈ 17 ಮತ್ತು 18ರಂದು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅತಿ ಭಾರಿ ಮಳೆ ಸಂಭವಿಸಲಿದೆ ಎಂದು ಅಂದಾಜಿಸಿದೆ. ಹಾಗೆಯೇ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲಾ ಜಲಪಾತಗಳು ತುಂಬಿ ಹರಿಯುತ್ತಿದ್ದು, ಜಲಪಾತಗಳ ಸೌಂದರ್ಯವನ್ನು ಸವಿಯಲು ಹೋಗುವ ಪ್ರವಾಸಿಗರಿಗೆ, ಅಂತಹ ಸ್ಥಳಗಳಿಗೆ ತೆರಳದಂತೆ ಸರ್ಕಾರ ಎಚ್ಚರಿಕೆಯನ್ನು ನೀಡಿದೆ.