ಉತ್ತರ ಕನ್ನಡದಲ್ಲಿ ಗುಡ್ಡ ಕುಸಿತ; ಮಣ್ಣಡಿ ಸಿಕ್ಕಿದ ಬೆಂಜ್ ಕಾರು.
ಉತ್ತರ ಕನ್ನಡ: ರಾಜ್ಯದ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಇದೇ ಮಂಗಳವಾರ ಗುಡ್ಡ ಕುಸಿತ ಸಂಭವಿಸಿತ್ತು. ಈ ಗುಡ್ಡ ಕುಸಿತಕ್ಕೆ ಸರಿ ಸುಮಾರು 15 ರಿಂದ 20 ಜನರು ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಗುಡ್ಡ ಕುಸಿತದಲ್ಲಿ ಬಿಳಿ ಬಣ್ಣದ ಬೆಂಜ್ ಕಾರು ಸಹ ಭೂ ಸಮಾಧಿ ಆಗಿದೆ ಎಂದು ತಿಳಿದುಬಂದಿದೆ. ಈ ಕಾರಿನೊಳಗೆ ಮುಂಬೈ ಮೂಲದ ಕುಟುಂಬ ಇತ್ತೆಂದು ಹೇಳಲಾಗುತ್ತಿದೆ.
ಮಣ್ಣಡಿಯಲ್ಲಿ ಬೆಂಜ್ ಕಾರಿನ ಸಿಗ್ನಲ್‌ನ್ನು ರಕ್ಷಣಾ ತಂಡ ಭೇದಿಸಿದೆ ಎನ್ನಲಾಗುತ್ತಿದೆ. ಸ್ಥಳೀಯರ ಪ್ರಕಾರ, ಈ ಕಾರು ತೆರಳುತ್ತಿದ್ದ ವೇಳೆಗೆ ಗುಡ್ಡ ಕುಸಿತ ಸಂಭವಿಸಿದೆ, ಇದನ್ನು ಕಂಡ ಕಾರ್ ಚಾಲಕ ಕಾರನ್ನು ರಿವರ್ಸ್ ತರಲು ಪ್ರಯತ್ನಿಸಿದ. ಆದರೆ ಅಷ್ಟೊತ್ತಿಗಾಗಲೇ ಗುಡ್ಡ ಕುಸಿದು ಬೆಂಜ್ ಕಾರನ್ನು ತನ್ನ ಒಡಲಲ್ಲಿ ಹಾಕಿಕೊಂಡಿತು ಎಂದು ಹೇಳುತ್ತಿದ್ದಾರೆ.
ಮೊದಲು ಅನ್ವೇಷಣೆಗೆ ಇಳಿದ ಶೋಧ ಕಾರ್ಯಾಚರಣೆ ತಂಡ, ಮೃತರ ಸಂಖ್ಯೆ ಕೇವಲ ಐದು ಇರಬಹುದು ಎಂದು ಭಾವಿಸಿತ್ತು.ಆದರೆ ದಿನ ಕಳೆದಂತೆ ಭೂ ಸಮಾಧಿ ಹಾಗೂ ಜಲ ಸಮಾಧಿಯಾದ ಮೃತ ದೇಹಗಳ ಸಂಖ್ಯೆ ಹೆಚ್ಚುತ್ತಲೇ ಇದೆ.