ಹಾರರ್ ‘ಹಗ್ಗ’ ಟೀಸರ್ ರಿಲೀಸ್; ‘ಸೂಪರ್ ಹೀರೋ’ ಆಗಿ ಅನು ಪ್ರಭಾಕರ್.

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅನೇಕ ದಿನಗಳ ನಂತರ ಒಂದು ಹಾರರ್ ಚಿತ್ರ ಲಭಿಸಿದೆ. ‘ಹಗ್ಗ’ ಚಿತ್ರ ಇಂತಹ ರೋಚಕ ಹಾರರ್ ಕಥೆಯನ್ನು ತೆರೆಯ ಮೇಲೆ ತರುವ ಹೊರಟಿದೆ. ಇದರ ಟೀಸರ್‌ನ್ನು ಆರ್. ಚಂದ್ರು ಅನಾವರಣ ಮಾಡಿದ್ದಾರೆ. ಈ ಸಮಾರಂಭದಲ್ಲಿ ಕೆ. ಮಂಜು ಹಾಗೂ ದಯಾಳ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಅವಿನಾಶ್, “ನಾನು ಮೂಲತಃ ಮ್ಯಕಾನಿಕಲ್ ಎಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು ‘ಹಗ್ಗ’ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ‘ಹಗ್ಗ’ ನೇ ನಮ್ಮ ಚಿತ್ರದ ನಾಯಕ. ಹಾರಾರ್ ಜಾನರ್ ನ ಚಿತ್ರವಾದರೂ, ಚಿತ್ರದಲ್ಲಿ ಒಂದು ಪ್ರಮುಖ ಸಂದೇಶ ಸಹ ಇದೆ.” ಎಂದರು.
ಈ ಚಿತ್ರದಲ್ಲಿ ನಾಯಕನಾಗಿ ವೇಣು ಅವರು ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಅನು ಪ್ರಭಾಕರ್, ಹರ್ಷಿಕಾ ಪೂಣಚ್ಚ, ಹಾಗೂ ತಬಲಾ ನಾಣಿ ಕೂಡ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. “ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು ‘ಸೂಪರ್ ಹೀರೋ’ ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಒಳ್ಳೆಯ ಪಾತ್ರಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ” ಎಂದು ನಟಿ ಅನು ಪ್ರಭಾಕರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ನಿರ್ಮಾಪಕ ರಾಜ್ ಭಾರದ್ವಾಜ್ ಅವರೆ “ಹಗ್ಗ” ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್ ಪಿ ಸಂಭಾಷಣೆ ಬರೆದಿದ್ದಾರೆ.