ಬೆಂಗಳೂರು ಮೆಟ್ರೋ ಭಾರೀ ದರ ಏರಿಕೆ: ರಾಜ್ಯ ಸರ್ಕಾರಕ್ಕೆ ಸಂಬಂಧವಿಲ್ಲವೆಂದ ಡಿ.ಕೆ.ಶಿವಕುಮಾರ್?!

ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಕುರಿತಂತೆ ರಾಜ್ಯ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರವನ್ನು ನ್ಯಾಯಾಧೀಶರ ನೇತೃತ್ವದ ಕೇಂದ್ರ ಸಮಿತಿ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ನಾವು ಹಸ್ತಕ್ಷೇಪ ಮಾಡುವುದಿಲ್ಲ!
ನಮ್ಮ ಮೆಟ್ರೋ ದರ ಏರಿಕೆ ಕುರಿತಂತೆ ಮಾತನಾಡಿದ ಶಿವಕುಮಾರ್, “ನ್ಯಾಯಾಧೀಶರ ನೇತೃತ್ವದ ಸಮಿತಿ ಶಿಫಾರಸು ಸಲ್ಲಿಸಿದೆ. ಬಿಎಂಆರ್‌ಸಿಎಲ್ ಕೂಡ ತನ್ನ ತೀರ್ಮಾನವನ್ನು ಕೈಗೊಂಡಿದೆ. ಆದರೆ, ನಾನು ಈ ನಿರ್ಧಾರಕ್ಕೆ ತಲೆಹಾಕುವುದಿಲ್ಲ,” ಎಂದು ಹೇಳಿದ್ದಾರೆ.
ನೀರು, ವಿದ್ಯುತ್ ದರ ಏರಿಕೆ ಸದ್ಯ ಅನಿವಾರ್ಯ?
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಬಿಎಸ್ಸೆಸ್ಸೆಂಬಿ ಕಳೆದ 14 ವರ್ಷಗಳಿಂದ ದರ ಹೆಚ್ಚಿಸಿಲ್ಲ. ಆದ್ದರಿಂದ, ನೀರಿನ ದರ ಹೆಚ್ಚಳ ಅನಿವಾರ್ಯ. ನಾವು ವಿದ್ಯುತ್ ದರವನ್ನು ಇತ್ತೀಚೆಗೆ ಕಡಿಮೆ ಮಾಡಿದ್ದೇವೆ. ಆದರೆ ಮಾಧ್ಯಮಗಳು ಅದನ್ನು ಪ್ರಸ್ತಾಪಿಸಲೇ ಇಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಪರಿವರ್ತನೆ – ಹೊಸ ಯೋಜನೆಗಳು!
ನಗರದ ಮೂಲಸೌಕರ್ಯ ಅಭಿವೃದ್ಧಿ ಕುರಿತು, ಹೆಬ್ಬಾಳ, ಗೋರಗುಂಟೆಪಾಳ್ಯ, ಬಿ.ಇ.ಎಲ್, ಲೊಟ್ಟೆಗೊಲ್ಲಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಡಬಲ್ ಡೆಕ್ಕರ್ ಹಂತದ ಮೇಲ್ಸೇತುವೆ ಮತ್ತು ಭೂಗತ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಲಾಗಿದೆ. ನಗರ ಸುಂದರೀಕರಣಕ್ಕಾಗಿ Brand Bengaluru ಯೋಜನೆಯಡಿ ಮೆಟ್ರೋ ಪಿಲರ್‌ಗಳ ಮೇಲೆ ಜಾಹೀರಾತಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
9,800 ಕೋಟಿ ರೂ. ವೆಚ್ಚ – ಡಬಲ್ ಡೆಕ್ಕರ್ ಫ್ಲೈಓವರ್!
ಶಿವಕುಮಾರ್ ಅವರ ಪ್ರಕಾರ, ಮೆಟ್ರೋ ಮಾರ್ಗಗಳ ಮೇಲೆ 40 ಕಿಮೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಯೋಜನೆಯಿದೆ. ಈ ಯೋಜನೆಗೆ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಖರ್ಚು ಹಂಚಿಕೊಳ್ಳಲಿವೆ.
ಹೊಸ ಟನಲ್ ರಸ್ತೆ – ವಿರೋಧ ಅಭಿಪ್ರಾಯಗಳಿಗೆ ತಿರುಗೇಟು!
“ಅಪಾರ ಶ್ರಮ ತೆಗೆದುಕೊಂಡು ನಡೆಯುವ ಈ ಯೋಜನೆಗಳು ಬೆಂಗಳೂರು ಹೊಸ ರೂಪ ಪಡೆಯಲು ಸಹಾಯ ಮಾಡಲಿದೆ. ಟನಲ್ ರಸ್ತೆಗಳ ವಿರುದ್ಧ ಇರುವವರ ಮಾತುಗಳಿಗೆ ನಾನು ಗಮನ ಕೊಡಲ್ಲ. ಕೆಲಸ ಉಳಿಯುತ್ತೆ, ಟೀಕೆಗಳು ಮಾಯವಾಗುತ್ತವೆ!” ಎಂದು ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.