ನವದೆಹಲಿ: ಭಾರತ ಮತ್ತು ಚೀನಾ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಎರಡು ದಿನಗಳ ಮಾತುಕತೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಈ ಗ್ರೀಷ್ಮಕಾಲದಲ್ಲಿ ಪುನರಾರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲು ಹಾಲಿ ಒಪ್ಪಂದಗಳ ಪ್ರಕಾರ ಚರ್ಚೆಗಳು ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜೊತೆಗೆ, ಭಾರತದೊಂದಿಗೆ ಚೀನಾ ನೇರ ವಿಮಾನ ಸೇವೆಯನ್ನು ಪುನಃ ಆರಂಭಿಸಲು ಒಪ್ಪಿಗೆ ವ್ಯಕ್ತವಾಗಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಚೀನಾದ ಬೀಜಿಂಗ್‌ನಲ್ಲಿ ನಡೆದ ವಿದೇಶಾಂಗ ಕಾರ್ಯದರ್ಶಿ-ಉಪ ವಿದೇಶಾಂಗ ಸಚಿವ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರು. ಈ ಮಾತುಕತೆ ದ್ವಿಪಕ್ಷೀಯ ಸಂಬಂಧಗಳನ್ನು ಪುನಃ ಸ್ಥಾಪಿಸುವ ಮತ್ತು ಜನಪರ ನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿತ್ತು.
ಕೈಲಾಸ ಮಾನಸ ಸರೋವರ ಯಾತ್ರೆಯ ಪುನರಾರಂಭವನ್ನು ಉಭಯ ದೇಶಗಳ ಸಂಬಂಧದ ಪುನರ್ ನಿರ್ಮಾಣದ ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ. 2020ರಲ್ಲಿ ಕೋವಿಡ್ ಪ್ರಾರಂಭದ ಬಳಿಕ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಗಲ್ವಾನ್ ಘರ್ಷಣೆಯ ಪರಿಣಾಮದಿಂದ ಚೀನಾ ಯಾವುದೇ ವ್ಯವಸ್ಥೆಯನ್ನು ಪುನಃ ಪ್ರಾರಂಭಿಸಿರಲಿಲ್ಲ.
ಸಭೆಯಲ್ಲಿ ನೇರ ವಿಮಾನ ಸೇವೆಗಳ ಪುನರಾರಂಭದ ತಂತ್ರಜ್ಞಾನ ಸಂಬಂಧಿತ ಚರ್ಚೆಗಳನ್ನು ಶೀಘ್ರವೇ ಆರಂಭಿಸಲು ನಿರ್ಧಾರವಾಗಿದ್ದು, ತಜ್ಞರ ಮಟ್ಟದ ಸಭೆಯ ಮೂಲಕ ಅಂತರಸೀಮಾ ನದಿಗಳ ಮಾಹಿತಿಯ ವಿನಿಮಯ ಹಾಗೂ ಇನ್ನಿತರೆ ಸಹಕಾರ ಕುರಿತು ಚರ್ಚೆ ನಡೆಯಲಿದೆ.
ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಚೀನಾದ ರಾಜಕೀಯ ಬ್ಯೂರೋ ಸದಸ್ಯರು ಮತ್ತು ಚೀನಾದ ಅಂತಾರಾಷ್ಟ್ರೀಯ ವಿಭಾಗದ ಸಚಿವ ಲಿಯು ಜಿಯಾನ್‌ಚಾವೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.