ಸೈಬರ್ ಕ್ರೈಂನ ಸ್ವರ್ಗವಾಗುತ್ತಿದೆಯಾ ಭಾರತ!?

ಭಾರತವು ಕಳೆದ 9 ತಿಂಗಳ ಅವಧಿಯಲ್ಲಿ ಸುಮಾರು 11,333 ಕೋಟಿ ರೂಪಾಯಿಗಳನ್ನು ಸೈಬರ್ ವಂಚನೆಯಲ್ಲಿ ಕಳೆದುಕೊಂಡಿದೆ. ಈ ಮೋಸದ ಜಾಲ ಹೇಗೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ʼಇಂಡಿಯಾ ಟುಡೇʼ ವಾಹಿನಿ ಬಯಲಿಗೆಳೆದಿದೆ. ಈ ಬಗ್ಗೆ ಗುಪ್ತ ಕಾರ್ಯಾಚರಣೆ ನಡೆಸಿದ ವಾಹಿನಿ, ಅಪರಾಧ ಕೃತ್ಯಗಳ ವಿಷಯದಲ್ಲಿ ʼಗೋಲ್ದನ್ ಟ್ರಯಾಂಗಲ್ʼ ಎಂಬ ಕುಖ್ಯಾತಿ ಹೊಂದಿರುವ ಮಯನ್ಮಾರ್, ಲಾವೋಸ್, ಕಾಂಬೋಡಿಯಾ ದೇಶಗಳಿಂದ ಹಲವು ಅತ್ಯಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಿದೆ.
ವಾಹಿನಿಯ ಮಾಹಿತಿಯ ಪ್ರಕಾರ, ಭಾರತೀಯರು ಸುಮಾರು 120,00,00,000 ಕೋಟಿ ಹಣವನ್ನು ಕೇವಲ ಸೈಬರ್ ವಂಚನೆಯೊಂದರಲ್ಲೇ ಕಳೆದುಕೊಂಡಿದ್ದಾರೆ. ಕಾಂಬೋಡಿಯಾ, ಮಯನ್ಮಾರ್ ಹಾಗೂ ಲಾವೋಸ್,ನ ಸಮುದ್ರದಂಚಿನಲ್ಲಿರುವ ಕೆಲವು ರೆಸಾರ್ಟ್ʼಗಳು, ಕಸಿನೋಗಳು ಹಾಗೂ ಅನಧಿಕೃತ ಕಟ್ಟಡಗಳಲ್ಲಿ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಈ ಮೂರೂ ದೇಶಗಳು ಮಾದಕ ದ್ರವ್ಯ ದಂಧೆ ಮತ್ತು ಅಕ್ರಮ ಮಾನವ ಸಾಗಣೆಗೆ ಕುಖ್ಯಾತಿ ಪಡೆದಿರುವುದರಿಂದ, ಅವುಗಳನ್ನು ಒಟ್ಟಾಗಿ ʼಗೋಲ್ಡನ್ ಟ್ರಯಾಂಗಲ್ʼ ಎಂದು ಕರೆಯಲಾಗುತ್ತದೆ!

ಭಾರತ, ಬಾಂಗ್ಲಾದೇಶ, ಮಯನ್ಮಾರ್ ಹಾಗೂ ಇತರ ದೇಶಗಳ ಸಾವಿರಾರು ಮಂದಿಯನ್ನು ಈ ಗೋಲ್ಡನ್ ಟ್ರಯಾಂಗಲ್ʼಗೆ ಅಕ್ರಮವಾಗಿ ಸಾಗಣೆ ಮಾಡುತ್ತಾರೆ. ಅಲ್ಲಿ ಅವರನ್ನೆಲ್ಲಾ ಬಲವಂತವಾಗಿ ಈ ಸೈಬರ್ ಕ್ರೈಮ್ ವಂಚನೆ ಪ್ರಕರಣಗಳಲ್ಲಿ ತೊಡಗಿಸುತ್ತಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ ಥಳಿಸಲಾಗುತ್ತದೆ ಮತ್ತು ಜೀವ ಬೆದರಿಕೆ ಹಾಕಲಾಗುತ್ತದೆ.
ಭಾರತೀಯ ಗೃಹ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, ಜನವರಿಯಿಂದ ಏಪ್ರಿಲ್ 2024ರ ಅವಧಿಯೊಳಗೆ, 7000 ಕೋಟಿ ರೂ.ಗಳನ್ನು ದೇಶದಿಂದ ಸೈಬರ್ ವಂಚನೆಯ ಮುಖಾಂತರ ವಂಚಿಸಲಾಗಿದೆ. ಈ ಸಂಬಂಧ, 6 ಲಕ್ಷಕ್ಕೂ ಮಿಕ್ಕಿದ ಪ್ರಕರಣಗಳು ಭಾರತದ ವಿವಿಧ ಸೈಬರ್ ಠಾಣೆಗಳಲ್ಲಿ ದಾಖಲಾಗಿವೆ. 2023ರಲ್ಲಿ ದಾಖಲಾಗಿರುವ FIRಗಳಲ್ಲಿ ಸುಮಾರು 10,000 ಕ್ಕೂ ಹೆಚ್ಚಿನ ಪ್ರಕರಣಗಳು ಕೇವಲ ಹೂಡಿಕೆಗೆ ಸಂಬಂಧಿಸಿದ ಹಗರಣಗಳಿಗೆ ಸಂಬಂಧಿಸಿದ್ದವುಗಳಾಗಿವೆ. ಈ ವರ್ಷದ ಜನೆವರಿಯಿಂದ ಏಪ್ರಿಲ್ʼವೆರೆಗಿನ ಅವಧಿಯಲ್ಲಿ ಸುಮಾರು 3.25 ಲಕ್ಷ ಅಕ್ರಮ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಸಚಿವಾಲಯದ ಮಾಹಿತಿ ಪ್ರಕಾರ, ಜನರಿಗೆ ಉದ್ಯೋಗದ ಆಮಿಷ ಮತ್ತು ಹಣದ ಆಮಿಷ ತೋರಿ, ಅವರನ್ನು ಅಕ್ರಮ ಸೈಬರ್ ಕ್ರೈಂ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಮಯನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾ ಈ ಮೂರು ದೇಶಗಳಿಗೆ ʼವಿಸಿಟರ್ ವಿಸಾʼದಡಿಯಲ್ಲಿ ಭೇಟಿನೀಡಿರುವ ಸುಮಾರು 30,000 ಕ್ಕೂ ಹೆಚ್ಚು ಭಾರತೀಯರು ಇನ್ನೂ ದೇಶಕ್ಕೆ ಹಿಂದಿರುಗಿಲ್ಲ.
ʼEDʼ ಚಾರ್ಜ್ʼಶೀಟ್ʼನಲ್ಲಿ, ಸೈಬರ್ ವಂಚನೆಯಲ್ಲಿ ಸಿಲುಕಿ ಅಡಿಯಾಳಾಗಿದ್ದ, ʼಮನೀಷ್ ತೋಮರ್ʼ ಎಂಬ ವ್ಯಕ್ತಿಯ ಪ್ರಕರಣದ ಬಗ್ಗೆ ವಿವರಿಸಲಾಗಿದೆ. ಆ ವ್ಯಕ್ತಿ ವಿವರಿಸುವ ಪ್ರಕಾರ, ಆತನಿಗೆ ಇನ್ಸ್ಟಾಗ್ರಾಮ್ʼನಲ್ಲಿ ʼಬಾಬಿ ಕಟಾರಿಯಾʼ ಎಂಬ ವ್ಯಕ್ತಿ, ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಪರಿಚಯವಾಗುತ್ತಾನೆ. ಆತನ ನಂಬರ್ʼಗೆ ಸಂಪರ್ಕ ಮಾಡಿದ ಮನೀಷ್, ನಂತರ ಆತನ ಕಛೇರಿಗೆ ಭೇಟಿ ನೀಡುತ್ತಾನೆ. ಅಲ್ಲಿ ಆತನಿಗೆ ಸಿಂಗಾಪುರದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಮೊದಲು 2000 ರೂ.ಗಳನ್ನು ಪಾವತಿಸಿ, ನಂತರ ಉದ್ಯೋಗದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಲಾಗುತ್ತದೆ.
ನಂತರ ಈ ವ್ಯಕ್ತಿಯನ್ನು ʼವಿಸಿಟರ್ ವಿಸಾʼದಡಿಯಲ್ಲಿ ಲಾವೋಸ್ʼಗೆ ರವಾನಿಸಲಾಗುತ್ತದೆ. ಅಲ್ಲಿ ಒಂದು ಕಂಪನಿಯಲ್ಲಿ ಈತನ ಸಂದರ್ಶನ ತೆಗೆದುಕೊಂಡು, ಈತನ ಪಾಸ್ʼಪೋರ್ಟ್ ವಶಪಡಿಸಿಕೊಳ್ಳಲಾಗುತ್ತದೆ. ಮರುದಿನ ಆಫಿಸ್ʼಗೆ ಬರುವಂತೆ ತಿಳಿಸಲಾಗುತ್ತದೆ. ಮರುದಿನ ಹಾಜರಾದ ಈತನಿಗೆ, ಅಲ್ಲಿ Facebookನಲ್ಲಿ ನಕಲಿ ಖಾತೆಗಳನ್ನು ತೆರೆದು ಜನರನ್ನು ವಂಚಿಸಬೇಕೆಂದೂ, ಜನರನ್ನು ಡಾಲರ್ʼಗಳಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಬೇಕೆಂದೂ ಬೆದರಿಕೆ ಹಾಕಲಾಗುತ್ತದೆ. ಈ ರೀತಿ ಈ ವ್ಯಕ್ತಿ ಅಕ್ರಮ ಸೈಬರ್ ವಂಚನಾ ಜಾಲದಲ್ಲಿ ಸಿಕ್ಕಿಬೀಳುತ್ತಾನೆ.
ಮಯನ್ಮಾರ್, ಲಾವೋಸ್ ಹಾಗೂ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಛೇರಿಗಳು ಈ ರೀತಿಯ ಸೈಬರ್ ವಂಚನಾ ಜಾಲದಲ್ಲಿ ಸಿಲುಕಿರುವ ನೂರಾರು ಭಾರತೀಯರ ರಕ್ಷಣೆಗೆ ಪ್ರಯತ್ನಿಸುತ್ತಿವೆ. ಈ ಕೃತ್ಯಗಳಿಗೆ ಜನರನ್ನು ಅಕ್ರಮವಾಗಿ ಸಾಗಿಸುವವರ ವಿರುದ್ಧ, ಈಗಾಗಲೇ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಆರಂಭವಾಗಿದೆ.
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ