ತವರಿಗೆ ಮರಳದ ಭಾರತ ಕ್ರಿಕೆಟ್ ತಂಡ: ಯಾಕೆ ಗೊತ್ತಾ?
ಬಾರ್ಬಡೋಸ್: ಟಿ-20 ವಿಶ್ವಕಪ್ ಗೆದ್ದ ಸಂಭ್ರಮವನ್ನು ಇಡೀ ಭಾರತ ದೇಶವೇ ಆಚರಿಸಿತ್ತು. ಟೀಮ್ ಇಂಡಿಯಾದ ಬರುವಿಕೆಯನ್ನು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಕಾತುರದಿಂದ ಕಾಯುತ್ತಿದ್ದ ಸಂದರ್ಭದಲ್ಲಿ ಒಂದು ವಿಘ್ನ ಎದುರಾಗಿದೆ. ಏನದು ವಿಘ್ನ ಹಾಗಿದ್ದರೆ? ಯಾಕಿನ್ನು ಬರಲಿಲ್ಲ ಭಾರತೀಯ ಕ್ರಿಕೆಟಿಗರು? ಎಲ್ಲಿದ್ದಾರೆ ನಮ್ಮ ಹುಡುಗರು?
ಕೆರಿಬಿಯನ್ ದೇಶ ಬಾರ್ಬಡೋಸ್ ನಲ್ಲಿ ಟಿ-20 ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಇದರಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಎರಡನೇ ಬಾರಿ ಜಯಭೇರಿ ಬಾರಿಸಿತು. ವಿಶ್ವಕಪ್‌ನ್ನು ಸ್ವದೇಶಕ್ಕೆ ತರುವ ಆತುರದಲ್ಲಿ ಇದ್ದ ತಂಡಕ್ಕೆ, ಬಾರ್ಬಡೋಸ್ ಹವಾಮಾನ ಅಡ್ಡಿ ತಂದಿದೆ. ಈ ದೇಶ ಪ್ರಸ್ತುತ ತೀವ್ರ ಪ್ರಮಾಣದ ಬೆರಿಲ್ ಎಂಬ ಚಂಡಮಾರುತವನ್ನು ಎದುರಿಸುತ್ತಿದೆ. ಹಾಗಾಗಿ ಅಂತಾರಾಷ್ಟ್ರೀಯ ವಿಮಾನಯಾನವನ್ನು ಬಾರ್ಬಡೋಸ್ ಕೆಲ ಸಮಯಕ್ಕೆ ತಡೆ ಹಿಡಿದಿದೆ. ಹಾಗಾಗಿ ಭಾರತೀಯ ಕ್ರಿಕೆಟ್ ತಂಡ ಚಂಡಮಾರುತದ ತೀವ್ರತೆ ತಣಿಯುವ ತನಕ ಅಲ್ಲಿಯೇ ಇರಬೇಕಾಗುತ್ತದೆ.
ಸದ್ಯ ತಾವು ತಂಗಿರುವ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಭಾರತದ ಕ್ರಿಕೆಟ್ ತಂಡ. ಇಂದು ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಚಂಡಮಾರುತದ ದರ್ಶನ ನೀಡಿದರು. ಅದೇ ರೀತಿ ಇತರ ಆಟಗಾರರು ಕೂಡ ಅಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆದಷ್ಟು ಬೇಗ ಹವಾಮಾನ ಸರಿಯಾಗಿ ಭಾರತದ ಕ್ರಿಕೆಟ್ ತಂಡ ತವರಿಗೆ ಟ್ರೋಫಿಯೊಂದಿಗೆ ಬರಲಿ ಎಂದು ಹಾರೈಸೋಣ.