ತಿರುಪೊರುರ್: ಚೆನ್ನೈನ ಸಮೀಪದ ತಿರುಪೊರುರ್ ಅರುಳ್ಮಿಗು ಕಂದಸ್ವಾಮಿ ದೇವಾಲಯದಲ್ಲಿ ಐಫೋನ್ ಕೈತಪ್ಪಿ ಹುಂಡಿಗೆ ಬಿದ್ದಿದ್ದು, ಭಕ್ತನಿಗೆ ಅದನ್ನು ಮರಳಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರಾಕರಿಸಿರುವ ಸುದ್ದಿ ಈಗ ವೈರಲ್ ಆಗಿದೆ. ಐಫೋನ್ ದೇವಾಲಯದ ‘ಹುಂಡಿ’ಯಲ್ಲಿ ಬಿದ್ದಿದ್ದು, ದೇವಾಲಯ ಆಡಳಿತ ಮಂಡಳಿಯು ಅದನ್ನು ದೇವರ ಆಸ್ತಿಯೆಂದು ಘೋಷಿಸಿದೆ.
ಎಲ್ಲಾಯಿತು ಈ ವಿಚಿತ್ರ ಘಟನೆ?
ವಿನಾಯಕಪುರಂ ನಿವಾಸಿ ದಿನೇಶ್ ತಮ್ಮ ಕುಟುಂಬದೊಂದಿಗೆ ಕಳೆದ ತಿಂಗಳು ದೇವಾಲಯಕ್ಕೆ ಭೇಟಿ ನೀಡಿದ್ದರು. ಪೂಜೆಯ ನಂತರ ಹುಂಡಿಗೆ ಹಣ ಹಾಕುವಾಗ, ಆಕಸ್ಮಿಕವಾಗಿ ಅವರ ಐಫೋನ್ ಹುಂಡಿಗೆ ಬಿದ್ದಿತ್ತು. ತಕ್ಷಣವೇ ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದ ದಿನೇಶ್, ಅವರ ಫೋನ್ ವಾಪಸು ಪಡೆಯಲು ಕೇಳಿಕೊಂಡರು. ಆದರೆ, ಅಧಿಕಾರಿಗಳು ಹುಂಡಿಗೆ ಬಿದ್ದ ವಸ್ತುಗಳು ದೇವರ ಆಸ್ತಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹುಂಡಿ ತೆರೆಯುವಾಗ ಮತ್ತೆ ನಿರಾಕರಣೆ:
ಹಿಂದಿನ ತಿಂಗಳು ನಡೆದ ಈ ಘಟನೆ ನಂತರ, ದಿನೇಶ್ HR & CE (ಹಿಂದೂ ಧಾರ್ಮಿಕ ಮತ್ತು ಪರೋಪಕಾರ ಶಾಖೆ) ಕಚೇರಿಗೆ ದೂರು ನೀಡಿದರು. ಹುಂಡಿ ತೆರೆಯುವ ದಿನದ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಡಿಸೆಂಬರ್ 15ರಂದು ಅದೇ ದೇವಸ್ಥಾನದ ಹುಂಡಿ ತೆರೆಯುವಾಗ ದಿನೇಶ್ ಮತ್ತೆ ಆಗಮಿಸಿದರು. ಆದರೆ ಅಧಿಕಾರಿಗಳು ಮತ್ತೆ ಅವರ ಬೇಡಿಕೆಯನ್ನು ನಿರಾಕರಿಸಿದರು.
ತೀವ್ರ ಮಾತುಕತೆಗಳ ನಂತರ ಅಧಿಕಾರಿಗಳು ಸಿಮ್ ಕಾರ್ಡ್ ತೆಗೆದುಕೊಳ್ಳಲು ಅವಕಾಶ ನೀಡಿದರು. ದಿನೇಶ್ ಈಗಾಗಲೇ ಹೊಸ ಸಿಮ್ ಬಳಸುತ್ತಿದ್ದರು ಎಂದು ವರದಿಯಾಗಿದೆ. ಆದ್ದರಿಂದ ಅವರು ಐಫೋನ್ ಮರಳಿ ಪಡೆಯಲು ಹೆಚ್ಚಿನ ಪ್ರಯತ್ನ ಮಾಡದೇ ಹೋದರು ಎನ್ನಲಾಗಿದೆ.
‘ಐಫೋನ್ ದೇವರ ಕಾಣಿಕೆ’: ಅಧಿಕೃತ ಪ್ರತಿಕ್ರಿಯೆ
ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಹೇಳಿದಂತೆ, “ದಿನೇಶ್ ಇದು ಕಾಣಿಕೆಯಾಗಿಯೇ ಹಾಕಿದರೋ ಅಥವಾ ಆಕಸ್ಮಿಕವೋ ಎಂಬುದು ನಮಗೆ ಖಚಿತವಿಲ್ಲ. ಹುಂಡಿ ಭದ್ರಿತವಾಗಿದ್ದು, ಅದರಲ್ಲಿ ಏನಾದರೂ ಬಿದ್ದರೆ ದೇವರ ಆಸ್ತಿಯೇ” ಎಂದು ಸ್ಪಷ್ಟಪಡಿಸಿದರು.
ಈ ಘಟನೆಯ ಸುತ್ತಲೂ ಕುತೂಹಲ:
ಈ ಘಟನೆ ದೇವಾಲಯಗಳಲ್ಲಿ ಕಾಣಿಕೆಯ ಹಕ್ಕು, ಭಕ್ತರ ಆಸ್ತಿಯ ಸ್ವಾಮ್ಯ ಹಕ್ಕುಗಳ ಕುರಿತು ಚರ್ಚೆಗೆ ಕಾರಣವಾಗಿದೆ.