ಇಸ್ರೇಲ್ ಸೇನೆ ದಾಳಿ: 20 ಜನ ಸಾವು…!

ದೇರ್ ಅಲ್ ಬಲಾಹ್ (ಗಾಜಾ ಪಟ್ಟಿ): ಇಸ್ರೇಲ್ ಸೇನೆಯು ಗಾಜಾ ಪಟ್ಟಿಯಾದ್ಯಂತ ನಡೆಸಿರುವ ವೈಮಾನಿಕ ದಾಳಿಯಲ್ಲಿ ಐವರು ಮಕ್ಕಳು ಸೇರಿ 20 ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ನೆಲದಲ್ಲಿ ನೆಲೆ ಕಳೆದುಕೊಂಡಿರುವ ಜನರು ಆಶ್ರಯ ಪಡೆದಿದ್ದ ವಸತಿ ಶಾಲೆ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳು ಸೇರಿ ಎಂಟು ಜನ ಸತ್ತಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
ದೇರ್ ಅಲ್ ಬಲಾಹ್ ನಗರದ ಕೇಂದ್ರ ಭಾಗದಲ್ಲಿರುವ ಮನೆಯೊಂದರ ಮೇಲೆ ಶನಿವಾರ ತಡರಾತ್ರಿ ನಡೆದ ದಾಳಿಯಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ ಎಂಟು ಜನರು ಹತರಾಗಿದ್ದಾರೆ ಎಂದು ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯಲ್ಲಿ ವೈದ್ಯ ಅಧಿಕಾರಿಗಳು ಹೇಳಿದ್ದಾರೆ. ಖಾನ್ ಯೂನಿಸ್ ನಗರದಲ್ಲಿ ಭಾನುವಾರ ನಡೆದಿರುವ ದಾಳಿಯಲ್ಲಿ ದಂಪತಿ ಹತರಾಗಿದ್ದಾರೆ. ಜೊತೆಗೆ ಗಾಜಾ ನಗರದಲ್ಲಿ ನಡೆದ ದಾಳಿಯಲ್ಲಿ ಕಾರಿನಲ್ಲಿದ್ದ ಇಬ್ಬರು ನಾಗರೀಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜನವಸತಿ ಪ್ರದೇಶದಲ್ಲಿ ಆಶ್ರಯ ಪಡೆದಿದ್ದ ಹಮಾಸ್ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಇಸ್ರೇಲ್ ಅಧಿಕಾರಿಗಳು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಾಬಲ್ಲಾ ಅವರಿಗೆ ಗಾಜಾ ಪ್ರವೇಶಿಸಲು ಮತ್ತು ಈ ಪ್ರದೇಶದಲ್ಲಿ ಸಣ್ಣ ಸಮುದಾಯವೆನಿಸಿರುವ ಕ್ರೈಸ್ತರೊಂದಿಗೆ ಕ್ರಿಸ್‌ಮಸ್ ಆಚರಿಸಲು ಅನುಮರಿ ನೀಡಿದ್ದಾರೆ. 14 ತಿಂಗಳಿಗಿಂತಲೂ ಹೆಚ್ಚು ಅವಧಿಯಿಂದ ಗಾಜಾದಲ್ಲಿ ಹಮಾಸ್ ವಿರುದ್ಧ ಯುದ್ಧದಲ್ಲಿ ತೊಡಗಿರುವ ಇಸ್ರೇಲ್ ಸೇನೆ ನಿತ್ಯ ದಾಳಿ ನಡೆಸುತ್ತಿದೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ