“ಜೈ ಹನುಮಾನ್” ಫಸ್ಟ್ ಲುಕ್ ರಿಲೀಸ್: ಆಂಜನೇಯನ ಪಾತ್ರ ನಿಭಾಯಿಸಲಿದ್ದಾರೆ ರಿಷಬ್ ಶೆಟ್ಟಿ..?!
ಬೆಂಗಳೂರು: ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮತ್ತೊಮ್ಮೆ ಮೈಲುಗಲ್ಲು ಸ್ಪರ್ಶಿಸಲು ಸಜ್ಜಾಗಿದ್ದಾರೆ. ತಮ್ಮ ಪವರ್ ಫುಲ್ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದ ಕಾಂತಾರ ಚಿತ್ರದಲ್ಲಿ ಕಾಡುಬೆಟ್ಟಿನ ಶಿವನ ಪಾತ್ರ ನಿರ್ವಹಿಸಿ, ನ್ಯಾಷನಲ್ ಅವಾರ್ಡ್ಸ್ ಮುಡಿಗೇರಿಸಿಕೊಂಡ ರಿಷಬ್, ಈಗ ಹೊಸ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಬಾರಿ, ತೆಲುಗು ನಿರ್ದೇಶಕ ಪ್ರಶಾಂತ್ ವರ್ಮಾ ಅವರ ‘ಜೈ ಹನುಮಾನ್’ ಚಿತ್ರದಲ್ಲಿ ಹನುಮಾನ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈ ದೀಪಾವಳಿಯಂದು ವಿಶೇಷವಾಗಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ರಿಷಬ್ ಶೆಟ್ಟಿ ಹನುಮಂತನಾಗಿ ಪೋಸ್ಟರ್‌ನಲ್ಲಿ ರಾರಾಜಿಸುತ್ತಿದ್ದಾರೆ.
ಈ ಪ್ರಾಜೆಕ್ಟ್ ಬಗ್ಗೆ ಚಿತ್ರತಂಡ ಹೇಳಿಕೆ ನೀಡಿದ್ದು, ರಿಷಬ್ ಅವರನ್ನು ಹನುಮಾನ್ ಪಾತ್ರಕ್ಕೆ ಆಯ್ಕೆ ಮಾಡಿರುವುದು ಅವರ ಕಠಿಣ ಪರಿಶ್ರಮ ಮತ್ತು ಅಭಿಮಾನಿಗಳ ಅಪಾರ ಮನ್ನಣೆ ಗಿಟ್ಟಿಸಿದ ಕಾರಣ. ಮೈತ್ರಿ ಮೂವೀಮೇಕರ್ಸ್ ಭಾರೀ ಬಜೆಟ್ ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರ, PVCU (ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್) ನ ಭಾಗವಾಗಿ ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರವಾಗಿ ಹೊರಹೊಮ್ಮುತ್ತಿದೆ.
ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹನುಮಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯು ಚಿತ್ರಪ್ರೇಮಿಗಳಿಗೆ ಸಂಭ್ರಮ ಮೂಡಿಸಿದೆ. ಕಾಂತಾರದಲ್ಲಿ ತೋರಿಸಿದ್ದ ರಿಷಬ್ ಅವರ ಸಾಮರ್ಥ್ಯ, ಅವರ ಈ ಹೊಸ ಪಾತ್ರಕ್ಕೆ ಹೆಚ್ಚು ಉತ್ಸಾಹ ಹಾಗೂ ನಿರೀಕ್ಷೆಯನ್ನು ಹುಟ್ಟಿಸಿದೆ. ಕೈಯಲ್ಲಿ ರಾಮನ ವಿಗ್ರಹ ಹಿಡಿದು ರಿಷಬ್ ನೀಡಿರುವ ಪವರ್ ಫುಲ್ ಪೋಸ್ ಎಲ್ಲರ ಮನ ಸೆಳೆಯುತ್ತಿದೆ.