“ಜೈ ಪ್ಯಾಲೆಸ್ಟೈನ್” – ಅಸಾದುದ್ದೀನ್ ಓವೈಸಿ.

ನವದೆಹಲಿ: ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದ ಮುಖಂಡ ಹಾಗೂ ಹೈದರಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಅಸಾದುದ್ದೀನ್ ಓವೈಸಿ ತಮ್ಮ ಪ್ರಚೋದನಕಾರಿ ಭಾಷಣ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಜಗಜ್ಜಾಹೀರಾಗಿದ್ದಾರೆ. ಇವರು ಇಂದು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಈ ವೇಳೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೊನೆಯಲ್ಲಿ, “ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ಟೈನ್….” ಎಂದು ಹೇಳಿದ್ದಾರೆ. ಆಶ್ಚರ್ಯ ಎಂದರೆ ಈ ಸಂಸದರು ಭಾರತದ ಸಂಸತ್ತಿನಲ್ಲಿ ನಿಂತು, ಭಾರತಾಂಬೆಗೆ ಜಯಘೋಷ ಎಂದಿಗೂ ನೀಡಿಲ್ಲ. ಭಾರತ ಮಾತೆಗೆ ಜೈ ಹೇಳುವುದು ನಮಗೆ ಧರ್ಮದ ನಂಬಿಕೆಗಳ ವಿರುದ್ಧ ಎಂದು ಹೇಳುವ ಗುಂಪಿನವರು ಈ ಓವೈಸಿ. ದೇವರಿಗಿಂತ ದೇಶ ದೊಡ್ಡದಲ್ಲ, ನಾವು ಎಂದಿಗೂ ದೇವರಿಗೆ ಮಾತ್ರ ತಲೆ ಬಾಗುತ್ತೇವೆ ಎನ್ನುವ ಗುಂಪು, ಪ್ಯಾಲೆಸ್ಟೈನ್ ದೇಶಕ್ಕೆ ಜಯಕಾರ ಹೇಳುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ದೊಡ್ಡ ಪ್ರಶ್ನೆ.
ಅಂತೂ ಅಸಾದುದ್ದೀನ್ ಓವೈಸಿ ಅವರು ಸಂಸತ್ತಿನಲ್ಲಿ ತಮ್ಮ ಧರ್ಮನಿಷ್ಠೆ ತೋರಿದ್ದಾರೆ. ಇದರಲ್ಲಿ ಬೇರೆ ಮಾತಿಲ್ಲ. ಇದೇ ಸಂಸದರು 2019ರ ತಮ್ಮ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ “ಜೈ ಭೀಮ್, ಜೈ ಮೀಮ್, ತಕ್ಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್” ಎಂದು ಹೇಳಿದ್ದರು.