ಮೆಟ್ರೋ ಪ್ರಯಾಣಿಕರಿಗೆ ಖುಷಿ ವಿಷಯ: ನಾಗಸಂದ್ರ-ಮಾದಾವರ ಮೆಟ್ರೋ ಮಾರ್ಗದಲ್ಲಿ ಪರೀಕ್ಷಾ ಸಂಚಾರ.
ಬೆಂಗಳೂರು: ಬೆಂಗಳೂರು ಮೆಟ್ರೋ ಹಸಿರು ಮಾರ್ಗದ ವಿಸ್ತರಣೆ ವಿಭಾಗದಲ್ಲಿ, ನಾಗಸಂದ್ರ-ಮಾದಾವರ ನಡುವೆ ಮೆಟ್ರೋ ರೈಲು ಪರೀಕ್ಷಾ ಸಂಚಾರವನ್ನು ಆರಂಭಿಸಲಾಗಿದೆ. ಈ ಭಾಗದಲ್ಲಿ ಮೆಟ್ರೋ ಸಂಚಾರವನ್ನು ತಂತ್ರಜ್ಞಾನ ಮತ್ತು ಸುರಕ್ಷತಾ ದೃಷ್ಟಿಯಿಂದ ಪರೀಕ್ಷಿಸಲಾಗುತ್ತಿದೆ.
ರೈಲು ಗಂಟೆಗೆ ಕನಿಷ್ಟ 5 ಕಿ.ಮೀ. ನಿಂದ ಗರಿಷ್ಠ 35 ಕಿ.ಮೀ. ವೇಗದವರೆಗೆ ಸಂಚರಿಸಿದ್ದು, ಪ್ರಾಥಮಿಕ ಹಂತದ ಪರೀಕ್ಷೆಗಳು ಯಶಸ್ವಿಯಾಗಿ ಪ್ರಾರಂಭವಾಗಿವೆ. ಮುಂದಿನ 15 ದಿನಗಳ ಕಾಲ ಈ ಪ್ರಾಥಮಿಕ ಪರೀಕ್ಷೆ ನಡೆಯಲಿದ್ದು, ನಂತರದ 45 ದಿನಗಳಲ್ಲಿ ಸಿಗ್ನಲಿಂಗ್, ದೂರಸಂಪರ್ಕ, ವಿದ್ಯುತ್ ಸರಬರಾಜು ವ್ಯವಸ್ಥೆಗಳ ಪರೀಕ್ಷೆ ಹಾಗೂ ಸಿಸ್ಟಂ ಸಂಯೋಜನೆ, ಸಾಮರ್ಥ್ಯ ಪರಿಶೀಲನೆ ನಡೆಸಲಾಗುತ್ತದೆ.
ಈ ಎಲ್ಲಾ ಹಂತಗಳನ್ನು ಪೂರೈಸಿದ ಬಳಿಕ ಗುಣಮಟ್ಟ ತಪಾಸಣಾ ಸಂಸ್ಥೆಗಳು ಸುರಕ್ಷತಾ ಪರೀಕ್ಷೆ ನಡೆಸಿ ವರದಿ ನೀಡಲಿವೆ. ಈ ವರದಿ ಸರಿಯಾಗಿ ಬಂದರೆ, ರೈಲ್ವೆ ಮಂಡಳಿಯು ಅಂತಿಮ ಅನುಮತಿ ನೀಡಿದ ನಂತರ, ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರವನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ಮಾಡಿಕೊಳ್ಳಲಿದೆ. ಈ ವರ್ಷಾಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.