Alma Corner

ಕಣ್ಮನ ಸೆಳೆದ ಕಡಲೆಕಾಯಿ ಪರಿಷೆ…!

ಬಸವನಗುಡಿ ಅಂದಾಕ್ಷಣ ಥಟ್ಟನೆ ನಮ್ಮ ಮನಸ್ಸಿಗೆ ಬರುವುದು ಪ್ರಖ್ಯಾತವಾದ ದೊಡ್ಡ ಗಣಪತಿ ದೇವಾಲಯ, ದೊಡ್ಡ ಬಸವನ ದೇವಾಲಯ, ಹಾಗೇ ಐತಿಹಾಸಿಕವಾದ ಕಡಲೆಕಾಯಿ ಪರಿಷೆ. ಪ್ರತೀವರ್ಷ ಕಾರ್ತೀಕ ಮಾಸದ ಕೊನೆಯ ಸೋಮವಾರ, ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಈ ವರ್ಷದ ಕಡಲೆಕಾಯಿ ಪರಿಷೆ, ನವೆಂಬರ್‌ 25ರ ಸೋಮವಾರದಂದು ಬಸವನಗುಡಿಯಲ್ಲಿ ಆರಂಭವಾಗಿದೆ. ಸ್ಥಳದಲ್ಲಿ ಮಾರುದ್ದದ ಮಳಿಗೆಗಳ ಸಾಲು, ಕಣ್ಣು ಹಾಯಿಸಿದಷ್ಟೂ ದೂರ ಜನ ಸಾಗರವೇ ಕಂಡುಬರುತ್ತಿದೆ. ಪರಿಷೆಯ ಪ್ರಯುಕ್ತ ಪುರಾಣ ಪ್ರಸಿದ್ಧ ದೊಡ್ಡ ಗಣಪತಿ ದೇವಾಲಯ ಹಾಗೂ ದೊಡ್ಡ ಬಸವನ ದೇವಾಲಯದಲ್ಲಿ ವಿಶೇಷವಾದ ಅಲಂಕಾರ ಮಾಡಲಾಗಿದ್ದು, ಹಲವು ಪೂಜೆಗಳು & ಪ್ರಸಾದ ವಿತರಣೆ ಕಾರ್ಯಗಳು ನಡೆಯುತ್ತಿವೆ. ದೇವಸ್ಥಾನಗಳ ಆವರಣದಲ್ಲಿ ಭಕ್ತಾದಿಗಳ ದಂಡೇ ನೆರೆದಿದ್ದು, ದರ್ಶನಕ್ಕಾಗಿ ಮಾರುದ್ದದ ಸಾಲು ಕಂಡುಬರುತ್ತಿದೆ. ಪ್ರತೀ ವರ್ಷದಂತೆಯೇ ಈ ವರ್ಷವೂ ಮಕ್ಕಳು, ಯುವಕರು, ವೃದ್ಧರು ಎನ್ನುವ ಬೇಧವಿಲ್ಲದೇ, ಸಾವಿರಾರು ಜನ ಬೆಂಗಳೂರಿನ ಮೂಲೆ ಮೂಲೆಗಳಿಂದ, ಬಸವನಗುಡಿಗೆ ಆಗಮಿಸುತ್ತಿದ್ದಾರೆ. ‌ಸಂಜೆಯಾಗುತ್ತಿದ್ದಂತೆ ಝಗ ಮಗಿಸುವ ಬೀದಿ ದೀಪಗಳ ಸಾಲು, ವೈವಿಧ್ಯಮಯವಾದ ಮಳಿಗೆಗಳು ಸಾಲು ಸಾಲು ಜನರನ್ನು ಆಕರ್ಷಿಸುತ್ತಿವೆ. ನಗರದ ಸುತ್ತಮುತ್ತಲಿನ ರೈತರು, ತಮ್ಮ ಕಡಲೆಕಾಯಿ ಬೆಳೆಯನ್ನು ದೊಡ್ಡ ಬಸವಣ್ಣನಿಗೆ ಅರ್ಪಿಸಿ, ನಂತರ ಮಾರಾಟಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ಕುಳಿತಿರುತ್ತಾರೆ. ಜನರ ಭದ್ರತೆಗಾಗಿ, ಪೋಲೀಸ್‌ ಇಲಾಖೆ ಹಲವು ಆಯಕಟ್ಟಿನ ಜಾಗಗಳಲ್ಲಿ CCTVಗಳನ್ನು ಅಳವಡಿಸಿ ನಿಗಾ ವಹಿಸಿದ್ದು, ಭದ್ರತೆಗೆಂದೇ ನೂರಾರು ಪೋಲೀಸರು ಸ್ಥಳದಲ್ಲಿ ನಿಯೋಜನೆಗೊಂಡಿದ್ದಾರೆ.

ಇಂತಹ ಕಡಲೆಕಾಯಿ ಪರಿಷೆಗೆ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನಲೆಯಿದೆ. ನೂರಾರು ವರ್ಷಗಳ ಹಿಂದೆ, ಬೆಂಗಳೂರಿನ ಇವತ್ತಿನ ಬಸವನಗುಡಿಯನ್ನು, ಸುಂಕೇನಹಳ್ಳಿ ಎಂದು ಕರೆಯಲಾಗುತ್ತಿತ್ತು. ಸುಂಕೇನಹಳ್ಳಿಯ ಸುತ್ತ ಮುತ್ತಲಿನ ಗವಿಪುರಂ, ಹೊಸಕೆರೆ ಹಳ್ಳಿ, ಗುಟ್ಟಹಳ್ಳಿ, ಮುಂತಾದ ಹಳ್ಳಿಗಳಲ್ಲಿ ಕಡಲೆಕಾಯಿ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಪ್ರತೀ ಪೌರ್ಣಮಿಯಂದು ಒಂದು ಬಸವ ಬಂದು, ರೈತರು ಕಷ್ಟಪಟ್ಟು ಬೆಳೆದ ಕಡಲೆಕಾಯಿ ಬೆಳೆಯನ್ನು ತಿಂದು ಹೋಗುತ್ತಿತ್ತು. ಒಮ್ಮೆ ಬೆಳೆಗಳಿಗೆ ಕಾವಲಿದ್ದ ರೈತರು, ಈ ಬಸವನನ್ನು ಹಿಡಿಯಲು ಪ್ರಯತ್ನಪಟ್ಟು, ಮಾರಕಾಸ್ತ್ರಗಳೊಂದಿಗೆ ಅದನ್ನು ಹಿಂಬಾಲಿಸಿದರು. ಆಗ ಬಹಳ ವೇಗವಾಗಿ ಓಡಿದ ಬಸವ ಒಂದು ಗುಡ್ಡದ ಮೇಲೇರಿ ಮರೆಯಾಯಿತು. ತಮ್ಮ ಕಣ್ಣ ಮುಂದೆಯೇ ಮಾಯವಾದ ಬಸವನನ್ನು ಕಂಡು ರೈತರು ಆಶ್ಚರ್ಯಪಟ್ಟರು. ಬಸವ ಮಾಯವಾದ ಆ ಜಾಗದಲ್ಲಿ, ಒಂದು ದೊಡ್ಡದಾದ ಕಲ್ಲಿನ ಬಸವ ಕಾಣಿಸಿಕೊಂಡಿತು. ಇದನ್ನ ಕಂಡ ರೈತರು ತಮ್ಮ ಕೈಲಿದ್ದ ಮಾರಕಾಸ್ತ್ರಗಳನ್ನು ಕೈಚೆಲ್ಲಿದರು. ಅಷ್ಟೇ ಅಲ್ಲ, ಗುಡ್ದದ ಮೇಲೆ ಕಾಣಿಸಿಕೊಂಡಿದ್ದ ಕಲ್ಲಿನ ಬಸವ ಬೃಹದಾಕಾರವಾಗಿ ಬೆಳೆಯತೊಡಗಿತು. ಇದನ್ನು ಕಂಡ ರೈತರು ಶಿರಬಾಗಿ ಬಸವನಿಗೆ ನಮಸ್ಕರಿಸಿದರು, ಶರಣಾದರು. ಶಿವನ ವಾಹನ ನಂದಿಯೇ ತಮ್ಮ ಬೆಳೆಗಳನ್ನು ತಿನ್ನಲು ಬಂದಿತ್ತು, ಇದು ನಮಗೆ ಆ ಪರಶಿವನ ಆಶೀರ್ವಾದ ಎಂದೇ ಭಾವಿಸಿದರು. ಬಸವನಿಗೆ ಅಲ್ಲೊಂದು ಚಿಕ್ಕ ಗುಡಿ ಕಟ್ಟಿಸಿದರು. ಬಸವನ ಆಶಿರ್ವಾದ ಪಡೆಯಲು, ಪ್ರತೀ ವರ್ಷ ಕಾರ್ತೀಕ ಮಾಸದ ಕಡೆಯ ಸೋಮವಾರ ತಾವು ಬೆಳೆದ ಬೆಳೆಯನ್ನು ಬಸವನಿಗೆ ಅರ್ಪಿಸಲು ನಿಂತರು. ಹಾಗೇ ನಿರಂತರವಾಗಿ ಬೆಳೆಯುತ್ತಿದ್ದ ಬಸವ ಇನ್ನಷ್ಟು ಎತ್ತರಕ್ಕೆ ಬೆಳೆಯಬಾರದೆಂದು, ಅದರ ನೆತ್ತಿಯ ಮೇಲೆ ಮೊಳೆ ಹೊಡೆದರು. ಮುಂದೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ದಕ್ಷಿಣ ಭಾರತೀಯ ಶೈಲಿಯಲ್ಲಿ ಈಗಿರುವ ಭವ್ಯ ಮಂದಿರ ಕಟ್ಟಿಸಿದರು. ಈಗ ಇಲ್ಲಿಗೆ ಬರುವ ಭಕ್ತರೂ ಕೂಡಾ ಕಡಲೇಕಾಯಿಯನ್ನು ಕೊಂಡು, ಅದನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ.

ಬಸವನಗುಡಿಯ ದೊಡ್ಡಗಣಪತಿ ದೇವಾಲಯ ಬಹಳ ಪ್ರಖ್ಯಾತವಾಗಿದ್ದು, ಬ್ಯೂಗಲ್‌ ರಾಕ್‌ ಉದ್ಯಾನಕ್ಕೆ ಹೊಂದಿಕೊಂಡಂತೆಯೇ ಈ ಸುಂದರ ದೇವಾಲಯವಿದೆ. ದೇವಾಲಯದಲ್ಲಿರುವ ಗಣಪತಿಯ ಬೃಹತ್ ಏಕಶಿಲಾ ವಿಗ್ರಹ ಸುಮಾರು 8 ಅಡಿ ಎತ್ತರ & 12 ಅಡಿ ಅಗಲವಿದೆ. ಈ ದೇವಾಲಯವನ್ನು ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಕ್ರಿ.ಶ 1537ರಲ್ಲಿ ನಿರ್ಮಿಸಿದರೆಂದು ಹೇಳಲಾಗುತ್ತದೆ. ಕೈಯಲ್ಲಿ ಶಂಖ, ಚಕ್ರ, ಪ್ರಸಾದ & ಮುರಿದ ದಂತವನ್ನು ಹಿಡಿದುಕೊಂಡಿರುವ ವಿಗ್ರಹ ನೋಡಲು ಅತ್ಯಾಕರ್ಷಕವಾಗಿದೆ. ಈ ವಿಗ್ರಹ ಸ್ವಯಂಭೂ ಅಥವಾ ಉದ್ಭವವಾದದ್ದು ಎಂದೂ ಹೇಳುತ್ತಾರೆ.

ದೊಡ್ಡಗಣಪತಿ ದೇವಾಲಯದ ಪಕ್ಕದಲ್ಲೇ ಇರುವ ಪ್ರಸಿದ್ಧವಾದ ದೊಡ್ಡ ಬಸವನ ದೇವಾಲಯವಿದೆ. ಈ ದೇವಾಲಯವೂ ಕೂಡಾ ಕೆಂಪೇಗೌಡರಿಂದ 1537ರಲ್ಲಿ ನಿರ್ಮಿತವಾಗಿದೆ. ಈ ದೇವಾಲಯದಲ್ಲಿರುವ ಬೃಹತ್‌ ನಂದಿಯ ವಿಗ್ರಹವು, ವಿಶ್ವದಲ್ಲಿರುವ ಅತೀ ದೊಡ್ಡ ನಂದಿ ವಿಗ್ರಹಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಈ ನಂದಿ ವಿಗ್ರಹವು ಸುಮಾರು 15 ಅಡಿ(4.6 ಮೀ) ಎತ್ತರ & 20 ಅಡಿ(6.1 ಮೀ) ಉದ್ದವಿದ್ದು, ಈ ವಿಗ್ರಹ ಕೂಡಾ ಉದ್ಭವಮೂರ್ತಿ ಎಂದು ಹೇಳಲಾಗುತ್ತಿದೆ. ದೇವಾಲಯದ ಬಾಗಿಲಲ್ಲಿ ದ್ವಾರ ಪಾಲಕರ ಶಿಲ್ಪಗಳಿದ್ದು, ಎದುರಿನಲ್ಲಿ ಬೃಹತ್‌ ಧ್ವಜಸ್ತಂಭವಿದೆ. ಈ ಕಂಬದಲ್ಲಿ ಸುಂದರವಾದ ಹಲವು ಬಗೆಯ ಉಬ್ಬು ಶಿಲ್ಪಗಳಿವೆ.

ಮೊದಲು, ರೈತರು ತಮ್ಮ ಕಡಲೆ ಬೆಳೆಯನ್ನು ಬಸವನಿಗೆ ಸಮರ್ಪಣೆ ಮಾಡುವುದಕ್ಕಷ್ಟೇ ಪರಿಷೆ ಸೀಮಿತವಾಗಿತ್ತು. ಆದರೆ ಬರು ಬರುತ್ತಾ ಬೆಂಗಳೂರು ನಗರ ವೇಗವಾಗಿ ಬೆಳೆಯಿತು, ಜನಸಂಖ್ಯೆಯೂ ಹೆಚ್ಚಾಯಿತು. ನಗರ ಆಧುನಿಕ ಭರಾಟೆಗೆ ತನ್ನನ್ನು ತಾನು ಒಡ್ಡಿಕೊಂಡಿತು. ಆಗ ಪರಿಷೆಯೂ ಈ ಆಧುನಿಕ ಬದಲಾವಣೆಗೆ ತೆರೆದುಕೊಂಡಿತು. ಕೇವಲ ರೈತರ ಆಚರಣೆಗಷ್ಟೇ ಸೀಮಿತವಾಗಿದ್ದ ಜಾಗದಲ್ಲಿ, ಥರಹೇವಾರಿ ಅಂಗಡಿಗಳು ಬಂದವು. ಸಾಂಸ್ಕೃತಿಕ ಆಚರಣೆಗಳ ಬದಲಾಗಿ, ವ್ಯಾಪಾರಿ ಮನೋಭಾವ ಬೆಳೆಯಿತು. ನಗರದ ಮೂಲೆ ಮೂಲೆಗಳಿಂದ ಸಾವಿರಾರು ಜನ ಪರಿಷೆಗೆ ಆಗಮಿಸತೊಡಗಿದರು. ಹಲವು ವಿದ್ಯಾರ್ಥಿಗಳಿಗೆ & ಯುವಕ ಯುವತಿಯರಿಗೆ  ಕಡಲೆಕಾಯಿ ಪರಿಷೆ, ಕೇವಲ ಮೋಜು ಮಸ್ತಿಯ ತಾಣವಾಗಿ ಬದಲಾಯಿತು.

Gajanan Bha̧̧t: ಆಲ್ಮಾ ಸ್ಕೂಲ್‌ ವಿದ್ಯಾರ್ಥಿ

Show More

Leave a Reply

Your email address will not be published. Required fields are marked *

Related Articles

Back to top button