ಕರಿಮಣಿ ಮಾಲೀಕನಾಗುತ್ತಿರುವ ಡಾಲಿ ಧನಂಜಯ್: ಫೆಬ್ರವರಿ 16ಕ್ಕೆ ಮದುವೆ ಮೂಹೂರ್ತ…!
ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಆಗಿರುವ ನಟ ಡಾಲಿ ಧನಂಜಯ್, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮ ಮದುವೆಯ ಗುಡ್ ನ್ಯೂಸ್ ನೀಡಿದರು. ಡಾಲಿ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆಗೆ ಎಲ್ಲರಿಗೂ ಉತ್ತರ ಸಿಕ್ಕಿದ್ದು, ಇದೀಗ ಅದನ್ನು ಸ್ವತಃ ಧನಂಜಯ ಅವರೇ ಹಂಚಿಕೊಂಡಿದ್ದಾರೆ.
ಧನಂಜಯ ತಮ್ಮ ಭಾವಿ ಪತ್ನಿ ಧನ್ಯತಾ ಅವರನ್ನು ಸುಂದರವಾದ ವಿಡಿಯೋ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಧನ್ಯತಾ, ಮೈಸೂರಿನಲ್ಲಿ ಓದಿದ್ದು, ಗೈನೋಕಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾಲಿ ಮತ್ತು ಧನ್ಯತಾ ಹಸೆಮಣೆ ಏರುವುದು ನಿಶ್ಚಯವಾಗಿದ್ದು, ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲವನ್ನು ಎಬ್ಬಿಸಿದೆ.
ಫೆಬ್ರವರಿ 16, ಮೈಸೂರು:
ಅಭಿಮಾನಿಗಳ ಹೃದಯದಲ್ಲಿ ಸಂಭ್ರಮ ಹೆಚ್ಚಿಸುವ ಇನ್ನೊಂದು ಸುದ್ದಿ ಇದೆ. ಡಾಲಿ ಮತ್ತು ಧನ್ಯತಾ ಅವರ ಮದುವೆ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ನಡೆಯಲಿದೆ. ಈ ಅದ್ದೂರಿ ಸಮಾರಂಭದಲ್ಲಿ ಚಿತ್ರರಂಗದ ಹಾಗೂ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ಮಾಂಗಲ್ಯ ಧಾರಣೆಯ ನಂತರ ಅದೆ ದಿನ ಸಂಜೆ ಆರತಕ್ಷತೆ ನಡೆಯಲಿದೆ.
ವಿಶೇಷ ಕವನದ ಮೂಲಕ ಪರಿಚಯ:
ಧನಂಜಯ ಅವರು ತಮ್ಮ ಬಾಳ ಸಂಗಾತಿಯನ್ನು ಪರಿಚಯಿಸುವಾಗ ಕವನ ಹೇಳುತ್ತಾ, ವಿಶಿಷ್ಟ ಶೈಲಿಯಲ್ಲಿ ಅಭಿಮಾನಿಗಳನ್ನು ಸೆಳೆದಿದ್ದಾರೆ. ಈ ವಿಡಿಯೋದಲ್ಲಿ ಧನ್ಯತಾ ಮುದ್ದಾಗಿ ಸೀರೆಯಲ್ಲಿ ಮಿಂಚಿದರೆ, ಧನಂಜಯ ಕೂಡ ನವ ವಧುವನ್ನು ಸುಂದರವಾಗಿ ಪರಿಚಯಿಸುತ್ತಿದ್ದಾರೆ. ಇಬ್ಬರ ಪ್ರೀತಿಯ ಈ ಪಯಣ ಅಭಿಮಾನಿಗಳ ಹೃದಯ ಗೆದ್ದಿದ್ದು, ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.