ಕೇದಾರನಾಥನ ಸನ್ನಿಧಿಯಲ್ಲಿ ಕಣ್ಣಪ್ಪ ತಂಡ: ಚಿತ್ರದ ಯಶಸ್ಸಿಗಾಗಿ 12 ಜ್ಯೋತಿರ್ಲಿಂಗ ಯಾತ್ರೆ..?!
ಹೈದರಾಬಾದ್: ಶಿವನ ಪರಮ ಭಕ್ತ ಕಣ್ಣಪ್ಪನ ಕಥೆ ಆಧಾರಿತ ಕಣ್ಣಪ್ಪ ಚಿತ್ರತಂಡ 12 ಜ್ಯೋತಿರ್ಲಿಂಗದ ಪವಿತ್ರ ಕ್ಷೇತ್ರಗಳಿಗೆ ಯಾತ್ರೆ ನಡೆಸಲು ಮುಂದಾಗಿದೆ. ಸ್ಫೂರ್ತಿದಾಯಕ ಆಧ್ಯಾತ್ಮಿಕ ಯಾತ್ರೆಯನ್ನು ಕೇದಾರನಾಥ ದೇವಾಲಯದ ದರ್ಶನದಿಂದ ಪ್ರಾರಂಭಿಸಿದ್ದು, ಹಿರಿಯ ನಟ ಮೋಹನ್ ಬಾಬು ಮತ್ತು ಅವರ ಪುತ್ರ ವಿಷ್ಣು ಮಂಚು, ನಿರ್ಮಾಪಕ ಮುಖೇಶ್ ಕುಮಾರ್ ಮತ್ತು ನಟ ಅರ್ಪಿತ್ ರಂಕಾ ಈ ವಿಶೇಷ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ.
ಪ್ರಾರ್ಥನೆಯಿಂದ ಪ್ರೇರಣೆ ಪಡೆದ ಚಿತ್ರತಂಡ:
ಕೇದಾರನಾಥನಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಬದರಿನಾಥ್ ಮತ್ತು ಋಷಿಕೇಶದಲ್ಲಿಯೂ ದರ್ಶನ ಮಾಡಿ, ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿದ ಚಿತ್ರತಂಡ, ಮುಂದಿನ ತಿಂಗಳುಗಳಲ್ಲಿ ಉಳಿದ ಜ್ಯೋತಿರ್ಲಿಂಗಗಳಿಗೆ ಭೇಟಿ ಮಾಡಲು ಉತ್ಸುಕವಾಗಿದೆ ಎಂದು ವಿಷ್ಣು ಮಂಚು ತಿಳಿಸಿದ್ದಾರೆ.
ವಿಶೇಷತೆಯೇನಿದೆ?
ಕಣ್ಣಪ್ಪ ಚಿತ್ರವನ್ನು ವಿಶೇಷವಾದ ದೃಶ್ಯ ವೈಭವದಿಂದ ಬೆರಗುಗೊಳಿಸಲು ತಯಾರಿಸುತ್ತಿದ್ದಾರೆ. ನ್ಯೂಜಿಲೆಂಡ್‌ನ ಸುಂದರ ದೃಶ್ಯಗಳಿಂದ ಪ್ರೇಕ್ಷಕರ ಕಣ್ಮನ ಸೆಳೆಯಲು ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚೌ ಈ ಚಿತ್ರಕ್ಕೆ ವಿಶೇಷ ಛಾಯಾಗ್ರಹಣ ಮಾಡಿದ್ದು, ಆಕರ್ಷಕ ದೃಶ್ಯಗಳು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿವೆ.
ಮಹಾ ತಾರಾಗಣ:
ಮುಖ್ಯ ಪಾತ್ರದಲ್ಲಿ ಮೋಹನ್‌ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಬಾಬು, ಶರತ್‌ಕುಮಾರ್, ಬ್ರಹ್ಮಾನಂದಂ ಮತ್ತು ಕಾಜಲ್ ಅಗರ್ವಾಲ್ ಇದ್ದು, 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಈ ಬೃಹತ್ ಚಿತ್ರ ನಿರ್ಮಾಣವಾಗುತ್ತಿದೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದ್ದು, ಅದನ್ನು ಸಿನಿಪ್ರಿಯರು ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದಾರೆ.