ಗೋಬಿ ಮಂಚೂರಿಯನ್ ಪ್ರಿಯರ ಗಮನಕ್ಕೆ! ಇದು ಕರ್ನಾಟಕ ಸರ್ಕಾರದ ಪ್ರಕಟಣೆ.
ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಹಲವಾರು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ‘ ಗೋಬಿ ಮಂಚೂರಿಯನ್ ಬ್ಯಾನ್ ‘ ಊಹಾಪೋಹಗಳಿಗೆ ಸಚಿವರು ಉತ್ತರ ನೀಡಿದ್ದಾರೆ.
ಗೋಬಿ ಮಂಚೂರಿಯನ್ ತಯಾರಿಸಲು ಬಳಸುವ ರೋಡಮೈನ್-ಬಿ ಎಂಬ ರಾಸಾಯನಿಕ ಆಹಾರ ಬಣ್ಣವನ್ನು ಕರ್ನಾಟಕ ಸರ್ಕಾರ ರಾಜ್ಯದಲ್ಲಿ ನಿಷೇಧಿಸಿದೆ. ಈ ರಾಸಾಯನಿಕವನ್ನು ಹೆಚ್ಚಿನದಾಗಿ ಗೋಬಿ ಮಂಚೂರಿಯನ್ ಹಾಗೂ ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇನ್ನು ಮುಂದೆ ಈ ರಾಸಾಯನಿಕವನ್ನು ಮಾರಾಟ ಮಾಡುವ ಮಾರಾಟಗಾರರ ಮೇಲೆ ಏಳು ವರ್ಷದ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷದವರೆಗಿನ ದಂಡ ವಿಧಿಸಲಾಗುವುದು ಎಂದು ಹೇಳಿದರು.
“ಜನರು ತಾವು ಯಾವ ರೀತಿಯ ಆಹಾರ ಪದಾರ್ಥವನ್ನು ಸೇವಿಸುತ್ತಿದ್ದಾರೆ ಮತ್ತು ಅದರಲ್ಲಿ ಏನೇನು ಬೆರೆಸಲಾಗಿದೆ ಎಂಬ ಮಾಹಿತಿ ತಿಳಿದಿರಬೇಕು. ರೆಸ್ಟೋರೆಂಟ್ ಮಾಲೀಕರು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಅತಿ ಹೆಚ್ಚು ಜವಾಬ್ದಾರರಾಗಿರಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸಚಿವರು ತಿಳಿಸಿದರು.
ರೋಡಮೈನ್- ಬಿ ಎಂಬುದು ಜವಳಿ ಮತ್ತು ಕಾಗದದ ಉದ್ಯಮದಲ್ಲಿ ಬಳಸಲಾಗುವ ರಾಸಾಯನಿಕ ಬಣ್ಣವಾಗಿದೆ. ಈ ರಾಸಾಯನಿಕವು ಹಸಿರು ಬಣ್ಣದ್ದಾಗಿದ್ದು, ಸ್ವಲ್ಪ ಪ್ರಮಾಣದ ಲಿಕ್ವಿಡ್ ಗೆ ಸೇರಿಸಿದಾಗ ಇದು ತಿಳಿ ಕೆಂಪು ಮತ್ತು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಗೋಬಿ ಮಂಚೂರಿಯನ್ ತಯಾರಿಕೆಯಲ್ಲಿ ಆಕರ್ಷಕ ಬಣ್ಣವನ್ನು ತರಲು ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಕಾರ್ಸಿನೋಜೆನಿಕ್ ಎಂಬ ರಾಸಾಯನಿಕವನ್ನು ಹೊಂದಿದ್ದು ಇದರಿಂದ ಮನುಷ್ಯರಲ್ಲಿ ಕ್ಯಾನ್ಸರ್ ರೋಗ ಉಂಟಾಗುತ್ತದೆ.
ಕರ್ನಾಟಕ ಸರ್ಕಾರ ಗೋಬಿ ಮಂಚೂರಿಯನ್‌ನನ್ನು ಬ್ಯಾನ್ ಮಾಡದಿದ್ದರೂ, ಜನರು ಇನ್ನು ಮುಂದೆ ಈ ಖಾದ್ಯವನ್ನು ಸೇವಿಸಬೇಕಾದರೆ, ಅದಕ್ಕೆ ಯಾವ ಯಾವ ಪದಾರ್ಥಗಳನ್ನ ಸೇರಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿದೇ ಸೇವಿಸಬೇಕು.