ಬೆಂಗಳೂರು: ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ ಉಪಚುನಾವಣೆಯ ಫಲಿತಾಂಶವು ಇಂದು ಹೊರ ಬರಲಿದೆ. ಇಂದು ಮುಂಜಾನೆಯಿಂದ ಮತದ ಎಣಿಕೆ ನಡೆಯುತ್ತಿದ್ದು, ಮೂರಕ್ಕೆ ಮೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ.
- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ:
ಈ ಬಾರಿ ಉಪ ಚುನಾವಣೆಯಲ್ಲಿ ತೀವ್ರ ಕಾವು ಹೆಚ್ಚಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ, ಕಾಂಗ್ರೆಸ್ ಹಾಗೂ ಜೆಡಿಎಸ್ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಹೊಂದಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಸಿ.ಪಿ. ಯೋಗೀಶ್ವರ್, ಜೆಡಿಎಸ್ ಪಕ್ಷದ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರನ್ನು ಎದುರಾಳಿಯಾಗಿ ಪಡೆದಿದ್ದರು. ಆದರೆ ಇಂದು ಸಿ.ಪಿ. ಯೋಗೀಶ್ವರ್ ಅವರು ಭಾರಿ ಮುನ್ನಡೆಯನ್ನು ಕಾಯ್ದುಕೊಂಡು ಗೆಲುವಿನ ಹೊಸ್ತಿಲನ್ನು ತುಳಿಯಲು ಕಾಯುತ್ತಿದ್ದಾರೆ. - ಸಂಡೂರು ವಿಧಾನಸಭಾ ಕ್ಷೇತ್ರ:
ಜನಾರ್ದನ್ ರೆಡ್ಡಿ ಅವರ ಆಪ್ತ ಬಂಗಾರು ಹನುಮಂತ ಬಿಜೆಪಿಯ ಪರವಾಗಿ ಇಲ್ಲಿ ಸ್ಪರ್ಧಿಸಿದ್ದರು. ಆದರೆ ಆಶ್ಚರ್ಯ ಎಂಬಂತೆ ಸಂಡೂರಿನ ಮತದಾರರು ಮಹಿಳೆ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ. ಅನ್ನಪೂರ್ಣ ಅವರಿಗೆ ಮಣೆ ಹಾಕಿದ್ದಾರೆ ಎಂದು ಅನ್ನಿಸುತ್ತಿದೆ. 12ನೇ ಸುತ್ತಿನಲ್ಲಿಯೂ ಕೂಡ ಶ್ರೀಮತಿ ಅನ್ನಪೂರ್ಣ ಅವರು 6500 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. - ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ :
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಕೇಂದ್ರ ಸಚಿವರಾದ ಶ್ರೀ. ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಅವರ ಚೊಚ್ಚಲ ಚುನಾವಣಾ ಕಣ ಇದಾಗಿದೆ. ಆದರೆ ಶಿಗ್ಗಾವಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯ ಕೈ ಹಿಡಿದಿರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಕಾಂಗ್ರೆಸ್ ಗೆಲುವಿನ ಹಾದಿ:
ಪ್ರಸ್ತುತ ಚುನಾವಣೆಯ ಫಲಿತಾಂಶದ ನೋಟವನ್ನು ಗಮನಿಸಿದರೆ, ಕರ್ನಾಟಕದ ಮೂರು ಉಪಚುನಾವಣೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದು, ಈ ಗೆಲುವು ಮುಂದಿನ ರಾಜಕೀಯ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮಗಳನ್ನು ಬೀರಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.