ಕರಾವಳಿ ಜಿಲ್ಲೆಗಳಿಗೆ ಎಚ್ಚರ! ಇನ್ನೂ ಮುಗಿದಿಲ್ಲ ವರುಣನ ಆರ್ಭಟ.
ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಇನ್ನು ಮುಗಿದಿಲ್ಲ. ಇಸ್ರೋ ಉಪಗ್ರಹದ ಮೂಲಕ ಭಾರತದ ಹವಾಮಾನವನ್ನು ಅಳೆಯಲಾಗಿದೆ. ಕರ್ನಾಟಕದ ಕರಾವಳಿಯನ್ನು ಸದ್ಯದ ಮಟ್ಟಿಗೆ ವರುಣ ಬಿಡುವ ಸಾಧ್ಯತೆ ಕಾಣುತ್ತಿಲ್ಲ. ಅರಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಸಂಭವಿಸುತ್ತಿರುವ ಹವಾಮಾನ ವಿದ್ಯಮಾನಗಳಿಂದ ರಾಜ್ಯ ಕರಾವಳಿ ಭಾರೀ ಪ್ರಮಾಣದ ಮಳೆಯನ್ನು ಪಡೆಯುತ್ತಿದೆ.
ಮಳೆ ಸಂಭವದ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಜುಲೈ 17 ರಿಂದ 25 ರವರೆಗಿನ ಮಳೆ ಮುನ್ನೆಚ್ಚರಿಕೆ ನೀಡಿದೆ. “ದಕ್ಷಿಣ ಗುಜರಾತ್ ಸಮುದ್ರ ತೀರದಿಂದ ಉತ್ತರದ ಕೇರಳ ಸಮುದ್ರ ತೀರದವರೆಗೆ ಸರಾಸರಿ ಸಮುದ್ರ ಮಟ್ಟಕ್ಕಿಂತಾ ಹೆಚ್ಚಿರುವ ಸಮುದ್ರದ್ದುಬ್ಬರ ಹಾಗೂ ಬಂಗಾಳಕೊಲ್ಲಿಗಳಲ್ಲಿ ಉಂಟಾಗಿರುವ ಕಡಿಮೆ ಒತ್ತಡ ಪ್ರದೇಶದಲ್ಲಿ ಹೆಚ್ಚು ತೇವಾಂಶದಿಂದ ಕೂಡಿದ ಗಾಳಿಯು ಬೀಸುತ್ತಿರುವ ಪರಿಣಾಮ ಮುಂಗಾರು ಪ್ರಕ್ಷುಬ್ಧಗೊಂಡಿದ್ದು, ರಾಜ್ಯದ ಕರಾವಳಿ, ಮಲೆನಾಡು ಹಾಗೂ ಮಲೆನಾಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ವ್ಯಾಪಕವಾಗಿ ಭಾರಿ ಮಳೆ ಮಳೆಯಾಗಲಿದ್ದು, ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಮಳೆಯಾಗಲಿದೆ.
ಜುಲೈ 17 ರಿಂದ 19 ರವರೆಗೆ ಕರಾವಳಿ ಕರ್ನಾಟಕ, ಮಲೆನಾಡು ಮತ್ತು ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯ ಚಟುವಟಿಕೆ ಮುಂದುವರಿಯುವ ಸಾಧ್ಯತೆಯಿದೆ ಮತ್ತು ನಂತರ ಮಳೆಯ ಚಟುವಟಿಕೆಯು ಕಡಿಮೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜುಲೈ 17 & 18 ರಂದು ಚದುರಿದಿಂದ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆ ಹಾಗೂ ಅಲ್ಲಲ್ಲಿ ಅತಿ ಭಾರಿ ಮಳೆ ಮತ್ತು ಜುಲೈ 20 ರಿಂದ 22 ರವರೆಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜುಲೈ 17 ರಿಂದ 19 ರವರೆಗೆ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ, ನಂತರ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ರಾಜ್ಯದ ಜನರು ಅದರಲ್ಲಿಯೂ ಕರಾವಳಿ ಜಿಲ್ಲೆಗಳಲ್ಲಿ ವಾಸವಾಗಿರುವ ಜನರು ಆದಷ್ಟು ಸುರಕ್ಷಿತವಾಗಿರಬೇಕು. ಜಿಲ್ಲಾಡಳಿತ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು.