ಶಿವಮೊಗ್ಗದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸ್ಪಂದಿಸಿದ ಸರ್ಕಾರ.
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಮಾವಳ್ಳಿ ಗ್ರಾಮದಲ್ಲಿ ಇರುವ ಐತಿಹಾಸಿಕ ಸ್ಮಾರಕಗಳು ಮತ್ತು ವೀರಗಲ್ಲು ಶಾಸನಗಳು ಅವನತಿಯ ಸ್ಥಿತಿಯಲ್ಲಿದೆ ಎಂದು ಸ್ಥಳೀಯರೊಬ್ಬರು ಎಕ್ಸ್ ಖಾತೆಯ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಈ ವಿಷಯ ತಿಳಿದ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಇದಕ್ಕೆ ಸ್ಪಂದಿಸಿದ್ದಾರೆ.
ಶಿವಮೊಗ್ಗದ ಹಲವಾರು ತಾಲೂಕುಗಳು ಕರ್ನಾಟಕ ಇತಿಹಾಸದ ಹತ್ತು ಹಲವು ಸ್ಮಾರಕಗಳಿಗೆ ಹಾಗೂ ಶಾಸನಗಳಿಗೆ ನೆಲೆಯಾಗಿದೆ. ಇಲ್ಲಿ ಕದಂಬರಿಗೆ ಸೇರಿದ ಶಾಸನಗಳು ಹಾಗೂ ಸ್ಮಾರಕಗಳಿಂದ ಹಿಡಿದು, ಕೆಳದಿ ರಾಜ ವಂಶದವರೆಗಿನ ಶಾಸನ ಮತ್ತು ಸ್ಮಾರಕಗಳನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಇವುಗಳನ್ನು ಉಳಿಸಿ ಕೊಳ್ಳುವುದು ಸರ್ಕಾರದಷ್ಟೇ ಅಲ್ಲದೆ ಸಾರ್ವಜನಿಕರ ಕರ್ತವ್ಯ ಕೂಡ ಆಗಿದೆ.
ಐತಿಹಾಸಿಕ ಸ್ಮಾರಕ ಹಾಗೂ ವೀರಗಲ್ಲು ಶಾಸನಗಳ ಕುರಿತು ವಿವರಣೆ ನೀಡಿರುವ ಶಿವಮೊಗ್ಗ ವಸ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕರು, ಐತಿಹಾಸಿಕ ಸ್ಮಾರಕಗಳು ಹಾಗೂ ವೀರಗಲ್ಲು ಶಾಸನಗಳು ಈ ಸ್ಥಳದಲ್ಲಿ ಕಂಡು ಬಂದಿರುತ್ತದೆ. ಅವುಗಳನ್ನು ಸಂರಕ್ಷಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.