ಮರಾಠೀ ಪುಂಡರನ್ನು ಹೆಡೆಮುರಿಕಟ್ಟಬಲ್ಲ ಪೌರುಷ ಬೆಳಗಾವಿಯ ಯಾವ ರಾಜಕೀಯ ನಾಯಕರಿಗೂ ಇಲ್ಲವೇ..!!?

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಮ್ಮ ರಾಜಕಾರಣಿಗಳು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ & ಅದಕ್ಕಾಗಿ ನಮ್ಮ ರಾಜ್ಯದ ಹಿತಾಸಕ್ತಿಯನ್ನು ಬೇಕಾದರೂ ಬಲಿಕೊಡುತ್ತಾರೆ ಎನ್ನುವುದಕ್ಕೆ ಬೆಳಗಾವಿ ಗಡಿ ವಿವಾದ ಒಂದು ಉತ್ತಮ ನಿದರ್ಶನ. ಭಾಷಾವಾರು ಪ್ರಾಂತ್ಯ ರಚನೆಯಾಗಿ ಏಳು ದಶಕಗಳೇ ಕಳೆದರೂ, ಮಹಾರಾಷ್ಟ್ರದ ಕಿರಿಕ್ಕಿನಿಂದಾಗಿ ಬೆಳಗಾವಿ ಗಡಿ ವಿವಾದ ಆಗಾಗ ಮುನ್ನಲೆಗೆ ಬರುತ್ತಲೇ ಇದೆ. ಯಥಾ ಪ್ರಕಾರ ಬೆಳಗಾವಿಯ ನಮ್ಮ ʼಮಹಾನ್ʼ ರಾಜಕೀಯ ನಾಯಕರುಗಳು ನಿರ್ವೀರ್ಯರಂತೆ ಶಾಂತಿ ಕಾಪಾಡಿ, ಇದು ಭಾಷಾ ಸಮಸ್ಯೆಯಲ್ಲ ಅಂತ ತಿಪ್ಪೆ ಸಾರಿಸೋ ಕೆಲಸ ಮಾಡ್ತಾರೆ. ವೋಟ್ ಬ್ಯಾಂಕ್ ರಾಜಕಾರಣ ಬೆಳಗಾವಿಯ ʼಮಹಾನ್ʼ ರಾಜಕೀಯ ನಾಯಕರ ಬಾಯಿ ಕಟ್ಟಿ ಹಾಕುತ್ತದೆ ಅನ್ನೋದನ್ನ ಅರಿತಿರುವ MES ಸೇರಿದಂತೆ ಕೆಲ ಮರಾಠೀ ಪುಂಡರು, ಯಥಾ ಪ್ರಕಾರ ತಮ್ಮ ಗೂಂಡಾಗಿರಿ ಶುರು ಮಾಡುತ್ತಾರೆ. ಗೂಂಡಾಗಳ ರೀತಿ ಕರ್ನಾಟಕ ಸಾರಿಗೆ ಬಸ್ ಚಾಲಕರಿಗೆ ಮಸಿ ಬಳಿಯೋದು, ಜೈ ಮಹಾರಾಷ್ಟ್ರ ಘೋಷಣೆ ಕೂಗಿಸೋದು, ಬಸ್ʼಗಳಿಗೆ ಮಸಿ ಬಳಿಯೋದು, ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಎರಚೋದು ಮುಂತಾದ ʼಪೌರುಷʼದ ಕೆಲಸ ಮಾಡುತ್ತಾರೆ. “ಕನ್ನಡಿಗರು ನಾಲಾಯಕರು” ಎಂದು ಬಹಿರಂಗ ಹೇಳಿಕೆ ನೀಡೋ MES ಪುಂಡನ ವಿರುದ್ಧ ಕೇವಲ ಕೇಸ್ ದಾಖಲಿಸಿ ಕೈ ತೊಳೆದುಕೊಳ್ಳುತ್ತದೆ ಪೊಲೀಸ್ ಇಲಾಖೆ! ಕರ್ನಾಟಕದ ಅನ್ನ, ನೀರು ಸೇವಿಸೋ ಈ ಗೂಂಡಾಗಳು ಇಷ್ಟೊಂದು ಕೊಬ್ಬಲು ಕಾರಣವೇನು!? ಅವರನ್ನು ತೆರೆಮರೆಯಲ್ಲಿ ರಕ್ಷಿಸುತ್ತಿರೋ ಆ ನಾಡದ್ರೋಹಿ ನಾಯಕರು ಯಾರು.!!?

1967ರಲ್ಲಿ ಕೇಂದ್ರ ಗೃಹ ಇಲಾಖೆಗೆ ಸಲ್ಲಿಕೆಯಾದ ಮಹಾಜನ್ ವರದಿಯಲ್ಲಿ, ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅನ್ನೋದನ್ನ ಸ್ಪಷ್ಟವಾಗಿ ಹೇಳಲಾಗಿದೆ. ಬೆಳಗಾವಿ ವಿವಾದ ಮುನ್ನಲೆಗೆ ಬಂದಾಗಲೆಲ್ಲ, ಕರ್ನಾಟಕ ಸರ್ಕಾರ ಮಹಾರಾಷ್ಟ್ರದ ಮುಂದೆ ಇದೇ ವಾದವನ್ನಿಡುತ್ತಿದೆ. ಆದರೆ ಮಹಾರಾಷ್ಟ್ರ ಇದನ್ನು ಯಾವತ್ತೂ ಒಪ್ಪಿಕೊಂಡಿಲ್ಲ. ಅಸಲಿಗೆ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂಬ ವಿಷಯವನ್ನೇ ಕೆಲ ಮರಾಠೀ ಪುಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಹಾಗಾಗಿ ಆಗಾಗ ಕೆಲವು ಗೂಂಡಾಗಳು ಗಡಿಯಲ್ಲಿ ಕರ್ನಾಟಕ – ಮಹಾರಾಷ್ಟ್ರ ಎಂದು ಕಿರಿಕಿರಿ ಮಾಡುತ್ತಲೇ ಇರುತ್ತಾರೆ!!
ಮಹಾರಾಷ್ಟ್ರದ ಶಿವಸೇನೆ ಬೆಳಗಾವಿ ಗಡಿ ವಿವಾದವನ್ನು ಮುಂಚಿನಿಂದಲೂ ಚುನಾವಣಾ ಸರಕಾಗಿ ಬಳಸಿಕೊಳ್ಳುತ್ತಾ ಬಂದಿದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಚುನಾವಣಾ ಸಮಯ ಬಂದಾಗಲೆಲ್ಲಾ, ಶಿವಸೇನೆ ಬೆಳಗಾವಿ ವಿಷಯದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬರೋದು ಮಾಮೂಲಿಯಾಗಿದೆ. ಇದು ಅವರಿಗೆ ಚುನಾವಣಾ ಅಸ್ತ್ರವಾಗಿರೋದ್ರಿಂದ, ಶತಾಯಗತಾಯ ಬೆಳಗಾವಿ ಗಡಿ ವಿವಾದವನ್ನು ಜೀವಂತವಾಗಿಡಬೇಕೆಂದು ಅವರು ಪ್ರಯತ್ನಿಸುತ್ತಾರೆ. ಬೆಳಗಾವಿ ನಗರ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮರಾಠೀ ಭಾಷಿಕರ ಸಂಖ್ಯೆ ಅಧಿಕವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ MES ರೀತಿಯ ಸಂಘಟನೆಗಳು ತಮ್ಮ ಪುಂಡಾಟ ಮೆರೆಯುತ್ತವೆ. ನವಂಬರ್ 1ರ ಕನ್ನಡ ರಾಜ್ಯೋತ್ಸವದ ದಿನವೇ ಅಲ್ಲಿ ʼಕರಾಳ ದಿನಾಚರಣೆʼ ಆಚರಿಸುತ್ತಾರೆ ಈ MESನವರು. ಅವರ ಈ ರ್ಯಾಲಿಗೆ ಸ್ವತಃ ಅಲ್ಲಿಯ ಪೊಲೀಸ್ ಇಲಾಖೆ ಬಂದೋಬಸ್ತ್ ಒದಗಿಸುತ್ತದೆ!! ಇಂತಹ ಸನ್ನಿವೇಶವನ್ನು ಬೇರೆ ಯಾವುದಾದರೂ ರಾಜ್ಯದಲ್ಲಿ ಕಾಣುವುದಕ್ಕೆ ಸಾಧ್ಯವಿದೆಯೇ!? ಆ ಪುಂಡರಿಗೆ ಶ್ರೀರಕ್ಷೆಯಾಗಿ ಸದಾ ನಿಲ್ಲುತ್ತಿರುವ ಆ ಕಾಣದ ಕೈ ಯಾವುದು.!!?

ಮುಂಚೆ ಬೆಳಗಾಂ ಅಂತಿದ್ದ ಜಿಲ್ಲೆಯ ಹೆಸರನ್ನು ಕರ್ನಾಟಕ ಸರ್ಕಾರ ಬೆಳಗಾವಿ ಅಂತ ಬದಲಸಿದ ಮೇಲಂತೂ, ಈ ʼಪ್ರತ್ಯೇಕತಾವಾದಿʼಗಳು ತಮ್ಮ ಬುಡಕ್ಕೆ ಬೆಂಕಿ ಬಿದ್ದಂತೆ ಆಡುತ್ತಿದ್ದಾರೆ. ತೀರ ಇತ್ತೀಚಿನವರೆಗೂ ಬೆಳಗಾವಿ ನಗರ ಪಾಲಿಕೆಯ ಮೇಲೆ ಕನ್ನಡ ಧ್ವಜ ಹಾರಿಸಲು ಅವಕಾಶ ನೀಡುತ್ತಿರಲಿಲ್ಲ ಈ ಪುಂಡರು. ಅಷ್ಟೇ ಅಲ್ಲ ಬೆಳಗಾವಿ ಪಾಲಿಕೆಯ ಮೇಯರ್ ಆಗಿ ಕೂಡಾ, MESನವರೇ ಚುನಾಯಿತರಾಗುತ್ತಿದ್ದರು. ಆದರೆ ಈಗಲೂ ಬೆಳಗಾವಿ ನಗರದ ಸ್ಥಿತಿ ಬದಲಾಗಿಲ್ಲ. ಬೆಳಗಾವಿ ನಗರದಲ್ಲಿ ಕನ್ನಡ ಮಾತಾಡಿದರೆ, ಈಗಲೂ ಕೆಲ ಮರಾಠೀ ಗೂಂಡಾಗಳು ಬಹಿರಂಗವಾಗಿ ಹಲ್ಲೆ ಮಾಡುತ್ತಾರೆ. ನಮ್ಮದೇ ರಾಜ್ಯದಲ್ಲಿ, ನಮ್ಮದೇ ನೆಲದಲ್ಲಿ, ನಮ್ಮ ಭಾಷೆ ಮಾತನಾಡಿದರೂ ಗೂಂಡಾಗಳಿಂದ ಒದೆ ತಿನ್ನಬೇಕಾದ ದುಸ್ಥಿತಿ ಇರೋದು ಬಹುಶಃ ಕರ್ನಾಟಕದಲ್ಲಿ ಮಾತ್ರ.!!
ಬೆಳಗಾವಿಯಲ್ಲಿ ಈ ಪರಿಸ್ಥಿತಿ ಬದಲಾಗಬೇಕಿದೆ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕಕ್ಕೆ ಸೇರಿದ್ದು ಎಂದು ಮರಾಠೀ ಪುಂಡರ ಎದುರು ಬಹಿರಂಗವಾಗಿ ಹೇಳುವಷ್ಟು ಗಟ್ಟಿಗುಂಡಿಗೆಯ ನಾಯಕ ಬೇಕಾಗಿದ್ದಾರೆ. ಪದೇ ಪದೇ ಬೆಳಗಾವಿ ನಮಗೆ ಸೇರಿದ್ದು ಎಂಬ ತಗಾದೆ ತೆಗೆಯೋ ಕೆಲ ಮರಾಠೀ ಗೂಂಡಾಗಳಿಗೆ, ಒಂದು ಕಾಲಕ್ಕೆ ಇಡೀ ಮಹಾರಾಷ್ಟ್ರವನ್ನೇ ಆಳಿದ ಚಾಲುಕ್ಯರ ಕ್ಷಾತ್ರತೇಜವಿರುವ ನೆಲ ನಮ್ಮದು ಅನ್ನೋದನ್ನ ನೆನೆಪಿಸಬೇಕಾಗಿದೆ..!!
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ