ಲಂಡನ್ʼನಲ್ಲಿ ಮುಂದುವರೆದ ʼಖಲಿಸ್ತಾನಿʼಗಳ ಆಟಾಟೋಪ..!!

ಭಾರತದ ವಿಷಯದಲ್ಲಿ ಈ ಪಾಶ್ಚಿಮಾತ್ಯ ರಾಷ್ಟ್ರಗಳು ಯಾವತ್ತೂ ವಿಧೇಯವಾಗಿ ನಡೆದುಕೊಂಡಿಲ್ಲ. ಎದುರಿಗೆ ಸ್ನೇಹ ಹಸ್ತ ಚಾಚುವುದು, ಹಿಂಬದಿಯಿಂದ ಭಾರತದ ಬೆನ್ನಿಗೆ ಚೂರಿ ಹಾಕುವುದು ಇದು ಮೊದಲಿನಿಂದಲೂ ನಡೆಯುತ್ತಲೇ ಇದೆ. ಜಾಗತಿಕವಾಗಿ ಭಾರತ ಬಲಿಷ್ಠವಾಗುವುದನ್ನು ಯಾವತ್ತಿಗೂ ಸಹಿಸದ ಈ ʼಬಿಳಿಯರುʼ, ಸದಾ ಭಾರತದ ವಿರುದ್ಧ ಏನಾದರೊಂದು ಕುತಂತ್ರವನ್ನು ಮಾಡುತ್ತಲೇ ಇರುತ್ತಾರೆ. ಈ ಅಂತರಾಷ್ಟ್ರೀಯ ಪಿತೂರಿಗಳಲ್ಲಿ ಒಂದು ʼಖಲಿಸ್ತಾನಿʼಗಳ ಪೋಷಣೆ. ಭಾರತದ ವಿರೋಧಿ ಖಲಿಸ್ತಾನಿ ಶಕ್ತಿಗಳಿಗೆ ಬ್ರಿಟನ್, ಕೆನಡಾ, ಅಮೆರಿಕಾ ದೇಶಗಳು ತಮ್ಮ ದೇಶದಲ್ಲಿ ಆಶ್ರಯ ನೀಡಿವೆ. ಆಗಾಗ ಈ ದೇಶದ್ರೋಹಿಗಳು ವಿದೇಶೀ ನೆಲದಿಂದಲೇ ಭಾರತದ ವಿರುದ್ಧ ಗುಟುರು ಹಾಕುತ್ತಲೇ ಇರುತ್ತಾರೆ. ಈಗ ಲಂಡನ್ʼನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮೇಲೆ ಖಲಿಸ್ತಾನಿಗಳಿಂದ ದಾಳಿಯ ಯತ್ನ ನಡೆದಿದೆ. ಈ ಘಟನೆಯನ್ನು ಗಂಭೀರ ಭದ್ರತಾ ಲೋಪ ಎಂದು ಪರಿಗಣಿಸಿರುವ ಭಾರತ ಸರ್ಕಾರ, ಬ್ರಿಟಿಷ್ ಹೈ ಕಮಿಷನ್ʼಗೆ ಸಮನ್ಸ್ ಜಾರಿಗೊಳಿಸಿದೆ!

ಗುರುವಾರ ಲಂಡನ್ʼನ ʼChatham House Think Tankʼನಲ್ಲಿ ನಡೆದ ಸಂವಾದ ಕಾರ್ಯಕ್ರಮದಿಂದ ಹೊರಬಂದು, ತಮ್ಮ ಕಾರಿನತ್ತ ತೆರಳುತ್ತಿದ್ದ ಜೈಶಂಕರ್ ಮೇಲೆ ಖಲಿಸ್ತಾನಿ ಉಗ್ರನೋರ್ವ ದಾಳಿಯ ಯತ್ನ ನಡೆಸಿದ್ದಾನೆ. ಏಕಾಏಕಿ ಜೈಶಂಕರ್ ಕಾರಿನತ್ತ ನುಗ್ಗಲು ಯತ್ನಿಸಿದ ಉಗ್ರನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ಹರಿದು ಉದ್ಧಟತನ ಮೆರೆದಿರುವ ಘಟನೆಯೂ ನಡೆದಿದೆ. ಈ ವೇಳೆ ನೆರೆದಿದ್ದ ಖಲಿಸ್ತಾನಿಗಳು ಭಾರತದ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನ ಕೂಗುತ್ತಿದ್ದ ಘಟನೆ ಕೂಡ ನಡೆಯಿತು. ಜೈ ಶಂಕರ್, ಸಂವಾದ ಕಾರ್ಯಕ್ರಮ ಮುಗಿಸಿ ಹೊರಬರುವ ವೇಳೆಗಾಗಿಯೇ,ಕಟ್ಟಡದ ಆವರಣದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಗುಂಪು ನೆರೆದಿತ್ತು. ಭಾರತದ ವಿದೇಶಾಂಗ ಮಂತ್ರಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಟ್ಟಡದ ಮುಂದೆಯೇ, ಭಾರತ ವಿರೋಧಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಗುಂಪು ಸೇರಲು ಅವಕಾಶ ಮಾಡಿಕೊಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಬ್ರಿಟನ್ ಸರ್ಕಾರದ ಇಬ್ಬಗೆ ನೀತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ!
ಇದನ್ನು ಗಂಭೀರವಾದ ಭದ್ರತಾ ಪ್ರಮಾದ ಎಂದು ಕರೆದಿರುವ ಭಾರತದ ವಿದೇಶಾಂಗ ಇಲಾಖೆ, ಇದು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯದ ದುರುಪಯೋಗ ಎಂದು ಕರೆದಿದೆ. “ನಾವು ಪ್ರತ್ಯೇಕತಾವಾದಗಳ ಈ ಪ್ರಚೋದನಾಕಾರಿ ವರ್ತನೆಯನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ. ಕಾರ್ಯಕ್ರಮದ ಆತಿಥ್ಯ ವಹಿಸಿರುವ ಸರ್ಕಾರ, ಈ ರೀತಿಯ ಘಟನೆಗಳಲ್ಲಿ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆಯಾಗದಂತೆ ಗಂಭಿರವಾದ ಕ್ರಮ ಕೈಗೊಳ್ಳುತ್ತದೆ” ಎಂದು ನಾವು ಬಯಸುತ್ತೇವೆ ಎಂದು MEA ಹೇಳಿದೆ.
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ